ವೀರಾಜಪೇಟೆ, ಜ. ೧ : ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿ ತಾಲೂಕು ಕಚೇರಿ ಮುಂದೆ ನಾಗರಿಕ ಸಮಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ಕೂಟದ ಸಂಯುಕ್ತ ಸಮಿತಿ ವೀರಾಜಪೇಟೆ ವತಿಯಿಂದ ಪ್ರತಿಭಟನೆ ನಡೆಯಿತು.
ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದ್ದು, ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಪ್ರವೀಣ್ ಅವರಿಗೆ ಮನವಿ ಸಲ್ಲಿಸಲಾಯಿತು.
ವೀರಾಜಪೇಟೆ ನಾಗರಿಕ ಸಮಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ಕೂಟದ ಸಂಯುಕ್ತ ಸಮಿತಿಯ ಸಂಚಾಲಕ ಡಾ. ಇ ರಾ ದುರ್ಗಾಪ್ರಸಾದ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ವಿವಿಧ ಕೆಲಸಗಳಿಗಾಗಿ ಜನರು ತಾಲೂಕು ಕಚೇರಿಗೆ ಬರುತ್ತಾರೆ. ಆದರೆ, ಮಧ್ಯವರ್ತಿಗಳ ಹಾವಳಿಯಿಂದಾಗಿ ಜನರಿಗೆ ನೇರವಾಗಿ ಯಾವುದೇ ಕೆಲಸ ಆಗುತ್ತಿಲ್ಲ. ದಲ್ಲಾಳಿಗಳ ಮೊರೆ ಹೋಗದೇ ಯಾವುದೇ ಕೆಲಸವಾಗದಿರುವುದರಿಂದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ತಾಲೂಕು ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಹ ಸಂಚಾಲಕ ಮಾಳೇಟಿರ ಎಸ್. ಕಾಳಯ್ಯ ಮಾತನಾಡಿ, ವೀರಾಜಪೇಟೆ ತಾಲೂಕು ಕಚೆೆÃರಿಯಲ್ಲಿ ಸಿಬ್ಬಂಧಿಗಳು ಕಚೇರಿಗೆ ಬರುವ ಜನರಿಗೆ ಸಕಾರಾತ್ಮಕವಾಗಿ ಸ್ಪಂದಿಸದೆ ಅಲೆದಾಡಿಸುತ್ತಾರೆ ಎಂದರು.
ಚಾಮಿಯಾಲದ ಹನೀಫ್ ಮಾತನಾಡಿ, ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಮಧ್ಯವರ್ತಿಗಳದ್ದೇ ಹಾವಳಿ ಹೆಚ್ಚಾಗಿದೆ. ತಂದೆ ಮಾಡಿಟ್ಟ ಆಸ್ತಿಯನ್ನು ಮಕ್ಕಳು ಹಂಚಿಕೊಳ್ಳಬೇಕಾದರೂ ಕಷ್ಟವಾಗಿದೆ. ನಮ್ಮ ಆಸ್ತಿ ನಮ್ಮ ಸುಪರ್ದಿಯಲ್ಲಿದ್ದರೂ ಖಾತೆ ಬೇರೆಯವರ ಹೆಸರಿನಲ್ಲಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಪ್ರವೀಣ್, ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ತಾಲೂಕು ಕಚೇರಿಗೆ ಪ್ರತಿನಿತ್ಯ ಬರುವ ಬಡವರು ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಇಲಾಖೆಯಿಂದ ಸಿಗಬಹುದಾದ ಹಲವಾರು ಪ್ರಯೋಜನೆಗಳನ್ನು ತಲುಪಿಸಲು ಸದಾ ಸಿದ್ಧ. ಯಾರೂ ಕೂಡ ಕಚೇರಿಯಿಂದ ನೊಂದುಕೊAಡು ಹೋಗುವ ಪರಿಸ್ಥಿತಿ ಮುಂದುವರೆಯುವುದಿಲ್ಲ. ಮಧ್ಯವರ್ತಿಗಳ ಮೂಲಕ ಅಧಿಕಾರಿಗಳು ಕೆಲಸ ಮಾಡಿಸಿದರೆ ಯಾವುದೇ ಮುಲಾಜಿಲ್ಲದೆ ಕಾನೂನು ರೀತಿ ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ. ಸಾರ್ವಜನಿಕರು ತಮ್ಮ ಕೆಲಸಗಳಿಗೆ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ನೇರವಾಗಿ ತನ್ನ ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದು.
ಈ ಸಂದರ್ಭ ಸಮಿತಿಯ ಸದಸ್ಯರುಗಳಾದ ಷರೀಫ್, ರೆಹಮಾನ್, ಸಿಐಟಿಯು ಸಂಘಟನೆಯ ಎ ಸಿ ಸಾಬು, ಜನವಾದಿ ಸಂಘಟನೆಯ ಪದ್ಮಿನಿ, ಸಿಪಿಐಎಂನ ಮಹದೇವ್, ಹೆಚ್ ಬಿ ರಮೇಶ್, ರಮೇಶ್ ಮಾಯಮುಡಿ, ಬಾಳೆಕುಟ್ಟಿರ ದಿನಿ, ರಫೀಕ್, ಬಾಚುರ ಪೂಣಚ್ಚ, ಸಿದ್ದಾಪುರದ ಅನಿಲ್ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.