* ಗೋಣಿಕೊಪ್ಪ, ಜ. ೧: ಸಮೃದ್ಧಿ ಭಾರತದ ಕನಸನ್ನು ನನಸು ಮಾಡುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ ಎಂದು ದಕ್ಷಿಣ ಕನ್ನಡ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತಿಳಿಸಿದರು. ಗೋಣಿಕೊಪ್ಪ ದುರ್ಗಾ ಭೋಜಿ ಸಭಾಂಗಣದಲ್ಲಿ ವೀರಾಜಪೇಟೆ ಬಿ.ಜೆ.ಪಿ. ಮಂಡಲ ವತಿಯಿಂದ ಆಯೋಜಿಸಿದ್ದ ಬಿಎಲ್‌ಎ-೨ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು. ಮೋದಿ ಮತ್ತು ಅಮಿತ್ ಶಾ, ಭಾರತವನ್ನು ಅಭಿವೃದ್ಧಿಯ ಕಡೆಗೆ ಬೆಳಗಲು ಶ್ರಮಿಸುತ್ತಿದ್ದಾರೆ. ಇವರಿಗೆ ಬಲವಾಗಿ ನಿಲ್ಲುವ ಮೂಲಕ ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಗೊಳಿಸುವ ಕಾರ್ಯ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಬಿಎಲ್‌ಎ-೨ಗಳು ಕಾರ್ಯಕ್ರಮವನ್ನು ಸಮರ್ಪಕವಾಗಿ ಜಾರಿಗೊಳಿಸುವ ಅಗತ್ಯತೆ ಇದೆ.

ಈ ನಿಟ್ಟಿನಲ್ಲಿ ಬೂತ್‌ಮಟ್ಟದ ಕಾರ್ಯಕ್ರಮವನ್ನು ವಿಸ್ತರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ಸು ಗಳಿಸುವ ಮನೋಬಲವನ್ನು ಹೊಂದಬೇಕು ಎಂದು ಸಲಹೆ ನೀಡಿದರು. ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಇಂದು ಮೃತಪಟ್ಟವರು ಸಹಕಾಣಿಸುತ್ತಿದ್ದಾರೆ.ಇದರಿಂದಾಗಿ ಮತ ಕಳ್ಳತನ ನಡೆಯುವ ಉದ್ದೇಶಗಳಿಗೆ ಪ್ರೇರಣೆಯಾಗಬಹುದು. ಈ ಕಾರಣ ಬಿಎಲ್‌ಎ-೨ಗಳು ಕಾರ್ಯಕ್ರಮದಲ್ಲಿ ಮತ ಪಟ್ಟಿಯಲ್ಲಿನ ಅನಧಿಕೃತಗಳ ಹೆಸರುಗಳನ್ನು ತೆಗೆದುಹಾಕಲು ಪರಿಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದರು. ವೀರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಅಧ್ಯಕ್ಷತೆಯಲ್ಲಿ ಕಾರ್ಯಾಗಾರ ನಡೆಯಿತು. ಜಿಲ್ಲಾ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಬಲಿಷ್ಠ ಭಾರತದ ನಿರ್ಮಾಣಕ್ಕೆ ಬಿಜೆಪಿ ಅಸ್ತçವಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು. ನಿಕಟಪೂರ್ವ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಬೂತ್ ಮಟ್ಟದಲ್ಲಿ ಬಿಎಲ್‌ಎ-೨ ಅನುಷ್ಠಾನಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕುಂಞಗಡ ಅರುಣ್ ಭೀಮಯ್ಯ, ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್, ತಾಲೂಕು ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ, ಮುದ್ದಿಯಡ ಮಂಜು ಗಣಪತಿ ಸೇರಿದಂತೆ ಬಿಎಲ್‌ಎಗಳು, ಬೂತ್ ಅಧ್ಯಕ್ಷರುಗಳು ಇದ್ದರು.