ಸೋಮವಾರಪೇಟೆ, ಜ. ೧: ತಾಲೂಕಿನ ಗಣಗೂರು ಗ್ರಾಮ ಪಂಚಾಯಿತಿಗೆ ಒಳಪಡುವ ಸಂಗಯ್ಯನಪುರದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಕೃಷಿಕರೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸಂಗಯ್ಯನಪುರದ ಪೊನ್ನಪ್ಪ (೬೨) ಎಂಬವರೇ ಸಾವನ್ನಪ್ಪಿದವರು.

ಕಳೆದ ಎರಡು ದಿನಗಳ ಹಿಂದೆಯೇ ಘಟನೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಸಂಗಯ್ಯನಪುರದ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದ ಪೊನ್ನಪ್ಪ ಅವರು ಮನೆಯ ಸುತ್ತಮುತ್ತಲಿನ ಹೊಲದಲ್ಲಿ ಕೃಷಿ ಮಾಡಿಕೊಂಡಿದ್ದರು. ಮೊನ್ನೆ ಬೆಳಗ್ಗಿನ ಜಾವ ಮನೆಯಿಂದ ಅನತಿ ದೂರದಲ್ಲಿರುವ ಇಂದಿರಾ ಎಂಬವರಿಗೆ ಸೇರಿದ ಹೊಲದ ಪಕ್ಕದ ದಾರಿಯಲ್ಲಿ ತೆರಳುತ್ತಿದ್ದ ಸಂದರ್ಭ ಕಾಡಾನೆ ದಾಳಿ ನಡೆಸಿದೆ ಎನ್ನಲಾಗಿದೆ.

ಘಟನೆಯಿಂದ ಪೊನ್ನಪ್ಪ ಅವರ ತಲೆ, ಎದೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರೊಂದಿಗೆ ಸಾಕು ನಾಯಿಯ ಮೇಲೂ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದೆ. ಕಳೆದೆರಡು ದಿನಗಳಿಂದ ಪೊನ್ನಪ್ಪ ಅವರು ಕಾಣದ ಹಿನ್ನೆಲೆ ಸಂಶಯಗೊAಡ ಸ್ಥಳೀಯರು ಮನೆಯ ಬಳಿ ತೆರಳಿ ಪರಿಶೀಲನೆ ನಡೆಸಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಪೊನ್ನಪ್ಪ ಅವರ ಪತ್ನಿ ಹಾಗೂ ಮಕ್ಕಳು ಬೆಳ್ಳಾರಳ್ಳಿಯಲ್ಲಿ ನೆಲೆಸಿದ್ದು, ವಿಷಯ ತಿಳಿಸಿದ ಮೇರೆ, ಸ್ಥಳಕ್ಕಾಗಮಿಸಿ ಪೊಲೀಸ್ ದೂರು ನೀಡಿದ್ದಾರೆ.

ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ಹಾಗೂ ಅರಣ್ಯ ಇಲಾಖಾಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತರು ಪತ್ನಿ ಸೇರಿದಂತೆ ಓರ್ವ ಪುತ್ರ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

ಸ್ಥಳೀಯರ ಆಕ್ರೋಶ-ಕ್ರಮದ ಭರವಸೆ

ಕಾಡಾನೆ ದಾಳಿಯಿಂದ ಕೃಷಿಕ ಸಾವನ್ನಪ್ಪಿದ ಘಟನೆಗೆ ಸಂಬAಧಿಸಿದAತೆ ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಪ್ರದೇಶದಿಂದ ಕಾಡಾನೆಗಳು ನಿರಂತರವಾಗಿ ಜನವಸತಿ, ಕೃಷಿ ಪ್ರದೇಶಕ್ಕೆ ಆಗಮಿಸುತ್ತಿವೆ. ಕೃಷಿ ಫಸಲು ನಷ್ಟವಾಗುವುದು ಮಾಮೂಲಾಗಿದೆ. ಇದೀಗ ಮಾನವ ಪ್ರಾಣ ಹಾನಿಯಾಗಿದೆ. ಇದಕ್ಕೆ ಅರಣ್ಯ ಇಲಾಖೆಯ ವೈಫಲ್ಯ ಹಾಗೂ ನಿರ್ಲಕ್ಷö್ಯವೇ ಕಾರಣವಾಗಿದೆ. ಜನಸಾಮಾನ್ಯರ ಮೇಲೆ ದಾಳಿ ನಡೆಸುತ್ತಿರುವ ಕಾಡಾನೆಯನ್ನು ತಕ್ಷಣ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ, ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಲು ಮುಂದಾದರು.

ಸ್ಥಳಕ್ಕೆ ಆಗಮಿಸಿದ ಎಸಿಎಫ್ ಗೋಪಾಲ್ ಅವರು, ಕಾಡಾನೆಗಳು ಅರಣ್ಯದಿಂದ ಜನವಸತಿ ಪ್ರದೇಶಕ್ಕೆ ಆಗಮಿಸದಂತೆ ಕ್ರಮ ಕೈಗೊಳ್ಳಲಾಗುವುದು. ಆನೆ ಕಂದಕ ನಿರ್ಮಾಣ ಸೇರಿದಂತೆ ಸೋಲಾರ್ ಫೆನ್ಸಿಂಗ್ ಅಳವಡಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಇದರೊಂದಿಗೆ ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಲಾಗುವುದು ಎಂದರು. ತಕ್ಷಣಕ್ಕೆ ಮೃತರ ಅಂತ್ಯಸAಸ್ಕಾರಕ್ಕೆ ರೂ. ೫ ಸಾವಿರ ವಿತರಿಸಿದರು. ಅಧಿಕಾರಿಯ ಭರವಸೆಯ ಹಿನ್ನೆಲೆ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು.

ಘಟನಾ ಸ್ಥಳಕ್ಕೆ ಆರ್.ಎಫ್.ಓ. ಶೈಲೇಂದ್ರಕುಮಾರ್, ಡಿಆರ್‌ಎಫ್‌ಓ ಶ್ರವಣ್‌ಕುಮಾರ್, ಸಿಬ್ಬಂದಿಗಳಾದ ಈರಣ್ಣ, ವೆಂಕಟೇಶ್, ಪ್ರವೀಣ್‌ಕುಮಾರ್, ರಂಜಿತ್, ವೇದಮೂರ್ತಿ, ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಹದೇವ ಅವರುಗಳು ಭೇಟಿ ನೀಡಿ ಪರಿಶೀಲಿಸಿದರು.