ಸಿದ್ದಾಪುರ, ಜ. ೨: ಪಾನಮತ್ತನಾಗಿ ಜೀಪ್ ಚಾಲನೆ ಮಾಡಿದ ಪರಿಣಾಮ ವಾಹನ ಅಪಘಾತವಾಗಿ ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.

ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಅವರೆಗುಂದ ನಿವಾಸಿ ಪವನ್ ಕುಮಾರ್ (೩೫) ಎಂಬಾತ ಮದ್ಯಪಾನ ಸೇವಿಸಿ ಜೀಪ್ ಚಾಲನೆ ಮಾಡಿಕೊಂಡು ಕರಡಿಗೋಡು ರಸ್ತೆಗಾಗಿ ಅವರೆಗುಂದಕ್ಕೆ ತೆರಳುತ್ತಿದ್ದ ಸಂದರ್ಭ ಕರಡಿಗೋಡು ರಸ್ತೆ ಬದಿಯಲ್ಲಿ ಇಟ್ಟಿಗೆಯನ್ನು ಗೂಡ್ಸ್ ವಾಹನದಿಂದ ಇಳಿಸುತ್ತಿದ್ದ ಕಾರ್ಮಿಕರಿಗೆ ಡಿಕ್ಕಿ ಪಡಿಸಿದ್ದಾನೆ. ಇದರಿಂದ ಹುಂಡಿಯ ನಿವಾಸಿ ಸುರೇಶ್, ಹಳೆ ಸಿದ್ದಾಪುರ ನಿವಾಸಿ ಪತ್ತಾಕ್ ಎಂಬವರಿಗೆ ಗಾಯಗಳಾಗಿವೆ.

ಸುರೇಶ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಸಿದ್ದಾಪುರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಯಿತು.ಪತ್ತಾಕ್‌ಗೆ ಅಮ್ಮತ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಗ್ಗೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮದ್ಯಪಾನ ಸೇವಿಸಿ ಜೀಪ್ ಚಲಾಯಿಸಿ ಇಬ್ಬರಿಗೆ ಗಂಭೀರ ಗಾಯಗೊಳಿಸಿದ ಪವನ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಜೀಪ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಈ ಮಧ್ಯೆ ಆರೋಪಿಯ ತಾಯಿ ಅನಾರೋಗ್ಯದಿಂದ ಶುಕ್ರವಾರ ಅಪರಾಹ್ನ ಮೃತಪಟ್ಟಿದ್ದಾರೆ.