ಕಣಿವೆ, ಜ. ೪: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಕಂಡುಬರುವ ಬೀದಿನಾಯಿಗಳನ್ನು ಹಿಡಿದು ಆರೈಕೆ ಮಾಡುವ ನಿಟ್ಟಿನಲ್ಲಿ ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ ಮರೂರು ಬಳಿ ಸರ್ವೆ ನಂಬರ್ ೧/೧ ರಲ್ಲಿ ಒಂದು ಎಕರೆ ಸರ್ಕಾರಿ ಜಾಗವನ್ನು ಮೀಸಲಿಟ್ಟು ಅಲ್ಲಿ ನಡೆಸಲು ಮುಂದಾದ ಕಾಮಗಾರಿಯನ್ನು ಸ್ಥಳೀಯರು ತಡೆದು ಸ್ಥಗಿತಗೊಳಿಸಿದ ಘಟನೆ ಭಾನುವಾರ ನಡೆದಿದೆ.

ಇಲ್ಲಿ ಬೀದಿ ನಾಯಿಗಳ ಆರೈಕೆ ಕೇಂದ್ರ ಮಾಡಿದರೆ ಮೊದಲೇ ಕಾಡಾನೆಗಳ ಹಾವಳಿ ಇರುವ ಮರೂರು, ಹಕ್ಕೆ, ಕಣಿವೆ ವ್ಯಾಪ್ತಿಯ ಗ್ರಾಮಸ್ಥರಿಗೆ ತೀವ್ರ ಅನಾನುಕೂಲವಾಗಲಿದೆ.

ಅಲ್ಲದೇ ಇಲ್ಲಿ ಬೆಟ್ಟ ಅಗೆದು ರಸ್ತೆ ಮಾಡಲು ಮುಂದಾದರೆ ನೂರಾರು ಗಿಡ ಮರಗಳು ಆಹುತಿಯಾಗುತ್ತವೆ.

ಈ ಬಗ್ಗೆ ಹೆಬ್ಬಾಲೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಇಲ್ಲಿ ಯಾವ ಕಾರಣಕ್ಕೂ ಬೀದಿ ನಾಯಿಗಳ ಆರೈಕೆ ಕೇಂದ್ರ ಮಾಡದಂತೆ ಲಿಖಿತವಾಗಿ ಒತ್ತಾಯಿಸಲಾಗಿದೆ. ಹೀಗಿದ್ದರೂ ತಾಲೂಕು ಆಡಳಿತ ತರಾತುರಿಯಲ್ಲಿ ಕಾಮಗಾರಿ ನಡೆಸುವ ಉದ್ದೇಶವಾದರೂ ಏನು ಎಂದು ಪಂಚಾಯಿತಿ ಉಪಾಧ್ಯಕ್ಷೆ ಲತಾ, ಸದಸ್ಯೆ ಪುಟ್ಟಲಕ್ಷಿö್ಮ ಹಾಗೂ ಸ್ಥಳೀಯ ಪ್ರಮುಖರಾದ ಮೋಹನ್, ವೈರಮುಡಿ, ಸುರೇಶ್, ಮಹದೇವ, ಚೆಲುವರಾಜು ಮತ್ತಿತರರು ಪ್ರಶ್ನಿಸಿದರು.