ಶನಿವಾರಸAತೆ, ಜ. ೪: ಧಾರ್ಮಿಕ ಚಿಂತನೆ ಹಾಗೂ ಸದ್ಭಾವನೆ ಬಿತ್ತುವ ಸರ್ವಧರ್ಮ ಸಮ್ಮೇಳನ ಮತ್ತು ಸೌಹಾರ್ದ ಸಂಗಮ ಕಾರ್ಯಕ್ರಮಗಳಲ್ಲಿ ಜನತೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಪೋವನ ಕ್ಷೇತ್ರ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಕರೆ ನೀಡಿದರು.
ಸಮೀಪದ ಗಡಿಭಾಗ ಹೊಸೂರು ಗ್ರಾಮದ ಮಹಿಯದ್ದೀನ್ ಜುಮಾ ಮಸ್ಜಿದ್ ಹಿದಾಯ ಯೂತ್ ಕಮಿಟಿ ವತಿಯಿಂದ ನಡೆದ ಸೌಹಾರ್ದ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರಾಜಕೀಯ ಮುಖಂಡ ಹಾಗೂ ಸಾಮಾಜಿಕ ಚಿಂತಕ ನಿಕೇತ್ ರಾಜ್ ಮೌರ್ಯ ಪ್ರಾಸ್ತಾವಿಕ ನುಡಿಯಾಡಿ, ಮಾನವೀಯತೆ, ಮನುಷ್ಯತ್ವ ಇದ್ದರೆ ಅದುವೇ ಧರ್ಮ. ಇಸ್ಲಾಂ ಧರ್ಮದಲ್ಲಿ ಪ್ರವಾದಿ ಮಹಮ್ಮದ್ ಸ್ವರ್ಗ ತಾಯಿಯ ಪಾದಗಳಲ್ಲಿದೆ ಎಂಬ ಸಂದೇಶ ನೀಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖತೀಬರು ಹಾಗೂ ಕಸಾಪ ಸೋಮವಾರಪೇಟೆ ತಾಲೂಕು ಘಟಕದ ನಿರ್ದೇಶಕ ಶಾಫಿ ಸಅದಿ ಪ್ರತಿಜ್ಞಾ ವಿಧಿ ಬೋಧಿಸಿ, ಕನ್ನಡ ನಾಡು ಸೌಹಾರ್ದತೆಯ ನಾಡು, ಸರ್ವಧರ್ಮಗಳ ಸಹಕಾರದಿಂದ ಸೌಹಾರ್ದ ಸಂಗಮ ನಡೆದಿದ್ದು ಹೊಸೂರು ಜನತೆ ಒಗ್ಗಟ್ಟಿನಲ್ಲಿದ್ದಾರೆ ಎಂದರು. ಕಕ್ಕಿಂಜೆಯ ಡಾ.ಅಬ್ದುಲ್ ರಶೀದ್ ಝೈನಿ ಖಾಮಿಲ್ ಸಖಾಫಿ ಮುಖ್ಯ ಭಾಷಣ ಮಾಡಿ, ಎಲ್ಲಾ ಧರ್ಮಗಳು ಸೌಹಾರ್ದ ಪರಂಪರೆಯನ್ನು ಬೋಧಿಸುತ್ತವೆ. ಶಾಲೆಗಳು ಸೌಹಾರ್ದತೆ ಕಲಿಸುವ ಕಾರ್ಖಾನೆಗಳಾಗಬೇಕು ಎಂದರು. ಹಿಂದುಳಿದ ಸಮುದಾಯವನ್ನು ಅಪಕೀರ್ತಿ ಮಾಡಿದರೇ ದೇಶ ಉಳಿಯುವುದಿಲ್ಲ.ಅಭಿವೃದ್ಧಿಯಾಗುವುದಿಲ್ಲ.ಸೌಹಾರ್ದತೆಯ ಶಕ್ತಿ ಚರಿತ್ರೆಯ ಆಳದಲ್ಲಿ ಉದುಗಿದೆ ಎಂದರು. ಗೋಪಾಲಪುರ ಸಂತ ಅಂಥೋಣಿ ಚರ್ಚ್ನ ರೆ.ಫಾ. ಕ್ರಿಸ್ಟೋಫರ್ ಸಗಯರಾಜ್ ಮಾತನಾಡಿ, ಎಲ್ಲರನ್ನು ಸೃಷ್ಟಿ ಮಾಡಿದ ದೇವರನ್ನು ಪ್ರೀತಿಸಬೇಕು. ನಮ್ಮನ್ನು ನಾವು ಪ್ರೀತಿಸುವಂತೆ ನೆರೆಹೊರೆಯವರನ್ನೂ ಪ್ರೀತಿಸಬೇಕು ಎಂದರು. ರಾಜಕೀಯ ಮುಖಂಡ ಬಜೆಗುಂಡಿ ಯಾಕೂಬ್ ಹಾಗೂ ಸಕಲೇಶಪುರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮುರಳಿ ಮೋಹನ್ ಮಾತನಾಡಿದರು.
ಮಾಜಿ ಯೋಧರಾದ ಪ್ರದೀಪ್ ಕೌಕೋಡಿ, ದಿಲೀಪ್ ಕುಮಾರ್, ಕುಮಾರ್, ರವಿ ಪೂಜಾರಿ, ಯೋಧರಾದ ಹನೀಫ್ ,ಗಿರೀಶ್ , ಉಷಾಮನು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ.ಅದಮ್ ಹಾಜಿ, ಕೊಡ್ಲಿಪೇಟೆ ರಾಜಕೀಯ ಮುಖಂಡರಾದ ಅಬ್ದುಲ್ ಮಜೀದ್,ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಸಮಾಜ ಸೇವಕ ಫ್ರಾನ್ಸಿಸ್ ಡಿಸೋಜ, ಸಹಕಾರ ಸಂಘ ಅಧ್ಯಕ್ಷ ಪುಟ್ಟೇಗೌಡ, ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಜಿ. ಅನಂತ್, ಸಾಮಾಜಿಕ ಮುಖಂಡ ಡಿ.ಆರ್.ವೇದಕುಮಾರ್, ಹಿದಾಯ ಯೂತ್ ಕಮಿಟಿ ಪದಾಧಿಕಾರಿಗಳು , ಇತರರು ಉಪಸ್ಥಿತರಿದ್ದರು.
ಇಬ್ರಾಹಿಂ ಸಖಾಫಿ ಪ್ರಾರ್ಥಿಸಿ, ಖಾಸಿಂ ಹೊಸಕೋಟೆ ಸ್ವಾಗತಿಸಿ, ನೌಫಲ್ ಕೆ.ಬಿ.ಎಸ್.ಕಾರ್ಯಕ್ರಮ ನಿರ್ವಹಿಸಿದರು.ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.