ಕಣಿವೆ, ಜ. ೩ : ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇಗುಲದ ಬಳಿ ಕಾವೇರಿ ನದಿ ೧೮೧ನೇ ಮಹಾಆರತಿ ಕಾರ್ಯಕ್ರಮ ಶ್ರದ್ಧಭಕ್ತಿಯಿಂದ ನೆರವೇರಿತು.
ಕುಶಾಲನಗರದ ರಥಬೀದಿ ಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ವಾಸವಿ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಒಡೆಯರ್ ಪಾಲ್ಗೊಂಡು ನದಿಯ ದಂಡೆ ಯಲ್ಲಿ ಗಿಡ ನೆಟ್ಟರು.
ಬಳಿಕ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾವು ಕಾವೇರಿ ನದಿಗೆ ತಾಯಿಯ ಸ್ಥಾನ ಕೊಟ್ಟು ಪೂಜಿಸುತ್ತಿದ್ದೇವೆ. ಜೀವನದಿ ಕಾವೇರಿಯನ್ನು ನಾವೆಲ್ಲರೂ ಸಂರಕ್ಷಿಸಬೇಕು ಎಂದು ಕರೆ ನೀಡಿರು. ಹಿಂದಿನ ಸಂಸ್ಕೃತಿ, ಪದ್ಧತಿ ಹಾಗೂ ಪರಂಪರೆಗಳ ಬಗ್ಗೆ ನಾವೆಲ್ಲರೂ ಜಾಗೃತಿ ಮೂಡಿಸೋಣ ಎಂದು ಸಂಸದರು ಹೇಳಿದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಕಾವೇರಿಗೆ ಮಹಾ ಆರತಿ ಅದೊಂದು ಪವಿತ್ರ ಕಾರ್ಯ. ಆರತಿ ಮೂಲಕ ನದಿಯ ಬಗ್ಗೆ ಜನಜಾಗೃತಿ ಮೂಡುತ್ತಿರುವುದು ಶ್ಲಾಘನೀಯ.
ಪ್ರಕೃತಿಗೆ ಅಪಚಾರ ಮಾಡುತ್ತಾ ಅಭಿವೃದ್ಧಿಗೆ ಒತ್ತು ಕೊಡುವುದು ವಿನಾಶಕ್ಕೆ ಆಹ್ವಾನ ನೀಡಿದಂತೆ. ಹಾಗಾಗಿ ನದಿ ಹಾಗೂ ಪರಿಸರದ ಸ್ವಚ್ಛತೆಗೆ ಎಲ್ಲರೂ ಕಟಿಬದ್ಧರಾಗಬೇಕೆಂದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ನದಿಗೆ ಆರತಿಯ ಜೊತೆಗೆ ಸ್ವಚ್ಛತೆಗೂ ಒತ್ತು ಕೊಡಬೇಕು ಎಂದರಲ್ಲದೆ ನದಿಯ ಅತಿಕ್ರಮಣ ಹಾಗೂ ಒತ್ತುವರಿ ತಡೆಯಲು ವಿಶೇಷ ಒತ್ತು ನೀಡಲಾಗುವುದು. ಮನುಷ್ಯನಲ್ಲಿ ನದಿಯ ಬಗ್ಗೆ ಪೂಜ್ಯ ಭಾವ ಇರಬೇಕು ಎಂದರು
ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಕಾವೇರಿ ಉಳಿದರೆ ನಾಡು ಉಳಿಯುತ್ತದೆ. ಕಾವೇರಿ ಕೇವಲ ನದಿಯಲ್ಲ. ಅದು ಇಡೀ ಮನುಕುಲದ ಸಂಜೀವಿನಿ. ಹಾಗಾಗಿ ನದಿ ಹಾಗೂ ಪರಿಸರವನ್ನು ಉಳಿಸಲು ಎಲ್ಲರೂ ಶ್ರಮ ವಹಿಸಬೇಕು ಎಂದರು. ಕುಶಾಲನಗರದ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗಿನಲ್ಲಿ ಆರ್ಯವೈಶ್ಯ ಸಮಾಜದವರು ಕೇವಲ ೫೦೦ ಮಂದಿ ಇದ್ದು, ಕುಶಾಲನಗರದಲ್ಲಿ ೧೧೫ ಕುಟುಂಬಗಳಿವೆ. ಆದರೂ ಕುಶಾಲನಗರದ ಅಭಿವೃದ್ಧಿಗೆ ಆರ್ಯವೈಶ್ಯ ಮಂಡಳಿಯ ಕೊಡುಗೆಗಳ ಬಗ್ಗೆ ವಿವರಿಸಿದರು. ಕಾವೇರಿ ನದಿ ಸಂರಕ್ಷಣಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್.ಚAದ್ರಮೋಹನ್, ಕಳೆದ ೪೦ ವರ್ಷಗಳ ಹಿಂದೆ ನೇರವಾಗಿ ಬೊಗಸೆಯಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕುಡಿಯುತ್ತಿದ್ದ ಕಾವೇರಿ ನೀರನ್ನು ಇಂದು ನೇರವಾಗಿ ಕುಡಿಯಲು ಯೋಗ್ಯವಲ್ಲ ಎಂದು ಸರ್ಕಾರವೇ ಹೇಳುವ ಪರಿಸ್ಥಿತಿಗೆ ನಾವೆಲ್ಲಾ ಕಾರಣರಾಗಿದ್ದೇವೆ.
ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾವೇರಿ ಅಸ್ತಿತ್ವಕ್ಕೆ ಧಕ್ಕೆಯಾಗುವ ಆತಂಕವಿದೆ. ನದಿಯ ಸಂರಕ್ಷಣೆಗೆ ವಿಶೇಷ ಕಾನೂನು ರೂಪಿಸಬೇಕಿದೆ ಎಂದರು.
ಆರ್ಯವೈಶ್ಯ ಸಮಾಜದ ಹಿರಿಯರಾದ ವಿ.ಎನ್. ವಸಂತಕುಮಾರ್, ಕೆ.ಜೆ. ಸತೀಶ್, ವೈಶಾಕ್, ಪ್ರವೀಣ್, ಅಂಜನ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಮಹೇಶ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕುಡ ಅಧ್ಯಕ್ಷ ಪ್ರಮೋದ್, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಮಾಜಿ ಸದಸ್ಯ ಬಿ.ಬಿ. ಭಾರತೀಶ್, ಹಿರಿಯ ಸಹಕಾರಿ ಎಂ.ಎನ್. ಕುಮಾರಪ್ಪ, ಕೊಡವ ಸಮಾಜದ ಮಾಜಿ ಅಧ್ಯಕ್ಷ ಮೊಣ್ಣಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರ ಸವಿತಾ ರೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ನಿರ್ದೇಶಕಿ ಲೀಲಾವತಿ ಮೊದಲಾದವರಿದ್ದರು.
- ಕೆ.ಎಸ್.ಮೂರ್ತಿ