ಮಡಿಕೇರಿ, ಜ. ೩ : ಗರಗಂದೂರಿನಲ್ಲಿ ಮನೆ ಕಳೆದುಕೊಂಡಿದ್ದ ವೃದ್ಧೆ ಬೈರಿಗೆ ಇದೀಗ ಮನೆಯ ಭಾಗ್ಯ ಸಿಕ್ಕಿದೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಸಮಾಜ ಸೇವಕ ಪಿ. ಎಂ. ಲತೀಫ್ ಅವರು ಸ್ವಂತ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದು, ಇದೀಗ ಲತೀಫ್ ನುಡಿದಂತೆ ನಡೆದಿದ್ದಾರೆ.
ಈ ಹಿಂದೆ ಬೈರಜ್ಜಿಗೆ ಸೂರಿಲ್ಲದೆ ಪ್ಲಾಸ್ಟಿಕ್ ಹೊದಿಕೆಯಲ್ಲಿ ಜೀವನ ನಡೆಸುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವೀಡಿಯೋ ನೋಡಿ ತಕ್ಷಣ ಸ್ಪಂದಿಸಿದ ಅಬ್ದುಲ್ ಲತೀಫ್ ಅವರು ಶಾಸಕ ಡಾ.ಮಂತರ್ ಗೌಡ ಸಹಕಾರದಿಂದ ಮನೆ ನಿರ್ಮಿಸಿ ಕೊಡುವುದಾಗಿ ಘೋಷಿಸಿದ್ದರು. ಇದೀಗ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರಿಂದ ಇಂದು ಬೈರಿ ಮನೆ ಉದ್ಘಾಟನೆಗೊಂಡಿದೆ.