ಮಡಿಕೇರಿ, ಜ. ೪: ನಗರದ ಕೊಡಗು ವಿದ್ಯಾಲಯದ ೮ ನೇ ತರಗತಿ ವಿದ್ಯಾರ್ಥಿ ಕೆ.ಎಂ. ಆದಿತ್ಯ ಕೆಎಸ್‌ಸಿಎ ವತಿಯಿಂದ ಮಂಗಳೂರು ವಿಭಾಗದ ಅಂಡರ್ ೧೪ ವಲಯ ಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾನೆ.

ಲೀಗ್ ಪಂದ್ಯಗಳಲ್ಲಿ ಉತ್ತಮ ಆಟ ಪ್ರದರ್ಶಿಸಿ ಅರ್ಧ ಶತಕ ಬಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದು, ಕೆಎಸ್‌ಸಿಎ ಅಂತರ ಜಿಲ್ಲಾ ಪಂದ್ಯಗಳಲ್ಲಿಯೂ ಆದಿತ್ಯ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಮಂಗಳೂರು ವಲಯ ಪ್ರತಿನಿಧಿಯಾಗಿ ಆಯ್ಕೆ ಮಾಡಲಾಗಿದೆ. ತಾ. ೧೫ ರ ವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಅಂತರ ವಲಯ (ರಾಜ್ಯಮಟ್ಟದ) ಕ್ರಿಕೆಟ್ ಪಂದ್ಯದಲ್ಲಿ ಮಂಗಳೂರು ವಲಯ ತಂಡವನ್ನು ಪ್ರತಿನಿಧಿಸಲಿರುವ ಆದಿತ್ಯ ಗಾಳಿಬೀಡು ನಿವಾಸಿ, ಪ್ರಸ್ತುತ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿರಸ್ತೇದಾರ್ ಆಗಿರುವ ಕರಕರನ ಮಧುಕರ ಮತ್ತು ಸಬಿತ ದಂಪತಿ ಪುತ್ರ.