ಮಡಿಕೇರಿ, ಜ. ೪: ಕೊಡಗು ಜಿಲ್ಲಾ ಬಂಟರ ಸಂಘದ ಮಹಾಸಭೆ ತಾ. ೧೧ ರಂದು ಮಡಿಕೇರಿಯ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ ಎಂದು ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟರ ಭವನ ನಿರ್ಮಾಣಕ್ಕೆ ಅಬ್ಬಿಫಾಲ್ಸ್ ರಸ್ತೆಯಲ್ಲಿ ಡಾ. ಪ್ರೇಮಾನಾಥ್ ಪೂಂಜಾ ಅವರು ೫೫ ಸೆಂಟ್ ಜಾಗವನ್ನು ದಾನವಾಗಿ ನೀಡಿದ್ದು, ರೂ. ೧೫ ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣ ಸಂಬAಧ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಇದರೊಂದಿಗೆ ನೂತನ ಸಮಿತಿ ರಚನೆಯ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ೪೮೬ ಸದಸ್ಯರಿದ್ದು, ಸದಸ್ಯತ್ವ ಹೆಚ್ಚಳಕ್ಕೂ ಮುಂದಾಗಲಾಗುವುದು ಎಂದರು.

ಬಂಟರ ಸಮುದಾಯದ ಏಳಿಗೆಗಾಗಿ ಸಂಘವನ್ನು ಹುಟ್ಟುಹಾಕಲಾಗಿದೆ. ಸಮುದಾಯದ ಸ್ಮಶಾನ ಅಭಿವೃದ್ಧಿಗೆ ಶಾಸಕರ ಅನುದಾನದಿಂದ ನವೀಕರಿಸಲು ಯೋಜನೆ ರೂಪಿಸಲಾಗಿದೆ. ಮತ್ತಷ್ಟು ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ವಿ. ರವೀಂದ್ರ ರೈ, ಗೌರವಾಧ್ಯಕ್ಷ ಬಿ.ಬಿ. ಐತ್ತಪ್ಪ ರೈ, ಖಜಾಂಚಿ ಬಿ.ಎನ್. ರತ್ನಾಕರ್ ರೈ, ಉಪಾಧ್ಯಕ್ಷ ಸದಾಶಿವ ರೈ, ಮಡಿಕೇರಿ ನಗರಾಧ್ಯಕ್ಷ ಪ್ರಭು ರೈ ಹಾಜರಿದ್ದರು.