ಶ್ರೀಮಂಗಲ, ಜ. ೫ : ಕೊಡವ ಭಾಷೆಯ ಸಾಹಿತ್ಯ ಬೆಳವಣಿಗೆಯಾಗುತ್ತಿರುವ ವೇಗ ನೋಡಿದರೆ ಕೊಡವ ಭಾಷೆ ಭಾರತ ಸಂವಿಧಾನದ ೮ ನೇ ಪರಿಚ್ಛೇದಕ್ಕೆ ಸೇರುವ ದಿನ ದೂರವಿಲ್ಲ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ಅಖಿಲ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ‘ಕೂಟ’ದ ೧೯೬ನೆ ಹೆಜ್ಜೆಯ “ಕನ್ಯಾರ್ ಕವನ” ಪುಸ್ತಕ ಬಿಡುಗಡೆ ಹಾಗೂ ರಾಜ್ಯ ಮಟ್ಟದ ಕೊಡವ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅವರು ಮಾತನಾಡಿದರು. ಎರಡನೆ ಅವಧಿಗೆ ಅಖಿಲ ಕೊಡವ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಕೊಡವ ತಕ್ಕ್ ಎಳ್ತ್ಕಾರಡ ಕೂಟದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಾಹಿತಿಗಳು ತಮ್ಮ ಸಾಹಿತ್ಯದಲ್ಲಿ ಕೊಡಗಿನ ಪ್ರಕೃತಿ-ಪರಿಸರ, ಕೊಡವ ಕಲೆ-ಸಂಸ್ಕೃತಿ, ಮಳೆ-ಬೆಳೆ, ಬದುಕು-ಬಾಂಧವ್ಯ, ವಿಶೇಷವಾದ ಆಹಾರ ಪÀದ್ಧತಿ ಸೇರಿದಂತೆ ಎಲ್ಲವನ್ನೂ ಪ್ರತಿಬಿಂಬಿಸುತಿದ್ದಾರೆ. ಇದು ಇನ್ನಷ್ಟು ಹೆಚ್ಚಾಗಲಿ. ಇದರೊಂದಿಗೆ ಮಕ್ಕಳನ್ನು ಮೊಬೈಲ್ ಸಂಸ್ಕೃತಿಯಿAದ ದೂರವಿರಿಸಿ, ಸಾಹಿತ್ಯ ಓದುವ ಸಂಸ್ಕೃತಿಯತ್ತ ಕರೆತರುವಂತೆ ಕಿವಿಮಾತು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣ ಅವರು ಮಾತನಾಡಿ ಕೊಡಗು ಸಾಹಿತ್ಯಕ್ಕೆ ಬರಡು ಭೂಮಿ ಎಂದು ಹೇಳುತ್ತಿದ್ದ ಮಾತನ್ನು ಕೊಡವ ತಕ್ಕ್ ಎಳ್ತ್ಕಾರಡ ಕೂಟವು ಸುಳ್ಳಾಗಿಸಿದೆ. ಯುವ ಲೇಖಕರಿಗೆ ಸಾಹಿತ್ಯ ಸೃಷ್ಟಿಸಲು ಪ್ರೋತ್ಸಾಹಿಸುವುದರೊಂದಿಗೆ ಹಿರಿಯ ಕಿರಿಯ ಲೇಖಕರಿಂದ ಬರೆಸಿ ೧೯೬ ಕೊಡವ ಸಾಹಿತ್ಯ ಪುಸ್ತಕಗಳನ್ನು ಹೊರತಂದಿರುವ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಕಾರ್ಯ ಶ್ಲಾಘನೀಯ. ಇವರಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು. ಈ ಹಿಂದೆ ಕೊಡವ ಸಾಹಿತ್ಯವು ಬರವಣಿಗೆ ರೂಪದಲ್ಲಿಲ್ಲದಿದ್ದರೂ ಕೊಡವ ಸಂಸ್ಕೃತಿಯ ಹೆಜ್ಜೆ ಗುರುತು ಜಾನಪದ ಹಾಡಿನ ರೂಪದಲ್ಲಿತ್ತು. ಕೊಡವ ಜಾನಪದ ಹಾಡಿನಲ್ಲಿರುವ ವರ್ಣನೆ ಇತರ ಯಾವ ಭಾಷೆಯ ಸಾಹಿತ್ಯದಲ್ಲೂ ಇಲ್ಲ. ಕೊಡವ ಸಾಹಿತ್ಯ ಬೆಳೆದಿದೆ, ಆದರೆ ಪ್ರಚಾರದ ಕೊರತೆ ಇದೆ. ಕೊಡವ ಭಾಷೆ ಇಂದು ಸಂವಿಧಾನದ ೮ನೆ ಪರಿಚ್ಛೇದಕ್ಕೆ ಸೇರುವ ಎಲ್ಲ ಅರ್ಹತೆಯನ್ನೂ ಪಡೆದಿದೆ ಎನ್ನುವುದರೊಂದಿಗೆ, ಲೇಖಕರು ತಮ್ಮ ಸಾಹಿತ್ಯವನ್ನು ಮುದ್ರಣಕ್ಕೆ ಕೊಡುವ ಮುನ್ನ ಹಿರಿಯ ಸಾಹಿತಿಗಳಿಂದ ವಿಮರ್ಷೆಗೊಳಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ‘ಕೂಟ’ ಕೊಡವ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಮಾಡಿದ ಸೇವೆ ಹಾಗೂ ಸಾಧನೆಗಳ ಮಾಹಿತಿ ನೀಡುತ್ತಾ ಕೊಡವರಿಗೆ ಎಡಮ್ಯಾರ್ನಿಂದ ಮೀನ್ಯಾರ್ವರೆಗೆ ಅವರದೇ ಆದ ತಿಂಗಳ ಪ್ರತ್ಯೇಕ ಹೆಸರುಗಳಿದ್ದು, ಎಲ್ಲಾ ತಿಂಗಳುಗಳೂ ಈ ಮಣ್ಣಿಗೆ, ಕೃಷಿಗೆ, ಕೊಡವರ ಹಬ್ಬಗಳಿಗೆ ಹಾಗೂ ಕೊಡವರ ಬದುಕಿನೊಂದಿಗೆ ಮಿಳಿತಗೊಂಡಿರುವುದಲ್ಲದೆ, ಕೊಡಗಿನ ಪ್ರಕೃತಿಯೂ ಇದಕ್ಕೊಪ್ಪುವ ರೀತಿಯ ಬದಲಾವಣೆ ಕಾಣುತ್ತದೆ. ಇದೆಲ್ಲವನ್ನೂ ನಮ್ಮ ಯುವ ಪೀಳಿಗೆಗೆ ಅರ್ಥೈಸುವ ರೀತಿಯ ಸಾಹಿತ್ಯ ಬಳುವಳಿ ನೀಡುವ ಉದ್ದೇಶದಿಂದ ಪ್ರತೀ ಕೊಡವ ತಿಂಗಳ ಹೆಸರಿನಲ್ಲಿ ವಿವಿಧ ಲೇಖಕರಿಂದ ಬರಹಗಳನ್ನು ಆಹ್ವಾನಿಸಿ ಪುಸ್ತಕ ಹೊರತರಲಾಗುತ್ತಿದೆ. ಈಗಾಗಲೇ ಕಕ್ಕಡ ಹಾಗೂ ಕನ್ಯಾರ್ ತಿಂಗಳ ಬಗ್ಗೆ ಪುಸ್ತಕ ಬಿಡುಗಡೆ ಮಾಡಲಾಗಿದೆ. ಪುತ್ತರಿ ಹಬ್ಬದ ನೆನಪಿಗಾಗಿ ಪುತ್ತರಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಆಹ್ವಾನಿಸುವ ಕೊಡವ ತಿಂಗಳು ಹಾಗೂ ಕೊಡವರ ಹಬ್ಬಗಳ ಬಗೆಗಿನ ಲೇಖನಗಳನ್ನು ಎಲ್ಲರೂ ಕಳುಹಿಸಿ ಪುಸ್ತಕ ಪ್ರಕಟಣೆಗೆ ಸಹಕರಿಸಬೇಕೆಂದು ಕೋರಿದರು.
‘ಕೂಟ’ದ ೧೯೬ನೆ ಪುಸ್ತಕ “ಕನ್ಯಾರ್ ಕವನ” ಬಿಡುಗಡೆ ಮಾಡಿ ಮಾತನಾಡಿದ ಕವಿಗೋಷ್ಠಿಯ ದತ್ತಿನಿಧಿ ಪ್ರಾಯೋಜಕಿ ಮೂಕಳೆರ ಟೈನಿ ಪೂಣಚ್ಚ ಅವರು ಕೊಡವ ಭಾಷೆಯ ಬೆಳವಣಿಗೆಯಾಗಬೇಕಾದರೆ ಕೊಡವ ಭಾಷೆಯಲ್ಲಿ ಹೆಚ್ಚು ಸಾಹಿತ್ಯ ಪುಸ್ತಕ ಹೊರತರುವುದರೊಂದಿಗೆ ಎಲ್ಲರೂ ಕೊಡವ ಭಾಷೆಯಲ್ಲೇ ಮಾತನಾಡಬೇಕು. ಪೋಷಕರು ಮಕ್ಕಳೊಂದಿಗೆ ಕೊಡವ ಭಾಷೆಯಲ್ಲೇ ಮಾತನಾಡಬೇಕೆಂದು ಕರೆ ನೀಡಿದರು.
ಮತ್ತೋರ್ವ ಮುಖ್ಯ ಅತಿಥಿ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ತಿನ ನಿರ್ದೇಶಕಿ ಮನ್ನೇರ ಸರಸ್ವತಿ ರಮೇಶ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸುವುದರೊಂದಿಗೆ ಕೊಡವ ಭಾಷೆಯಲ್ಲಿ ಪ್ರಕಟವಾದ ಪುಸ್ತಕಗಳನ್ನು ಎಲ್ಲರೂ ಓದಿ ಲೇಖಕರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಮತ್ತಷ್ಟು ಸಾಹಿತ್ಯ ಪುಸ್ತಕಗಳು ಪ್ರಕಟವಾಗಲು ಸಹಕರಿಸಬೇಕೆಂದರು. ಈ ಸಂದರ್ಭ ೪೦ ಕವಿಗಳು ಕವನ ವಾಚಿಸಿದರು. ‘ಕೂಟ’ದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಪ್ರಾರ್ಥಿಸಿ, ಉಪಾಧ್ಯಕ್ಷ ಚೆಂಬಾAಡ ಶಿವಿ ಭೀಮಯ್ಯ ಸ್ವಾಗತಿಸಿ ನಿರ್ದೇಶಕ ಕಾಳಿಮಾಡ ಮೋಟಯ್ಯ ನಿರೂಪಿಸಿ, ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ ವಂದಿಸಿದರು. ಸಹ ಕಾರ್ಯದರ್ಶಿ ಬೊಜ್ಜಂಗಡ ನಿತಿನ್ ನಂಜಪ್ಪ ಕವಿಗಳಿಗೆ ಮಾನ್ಯತೆ ಪತ್ರ ವಿತರಿಸಿದರು.ಅಖಿಲ ಕೊಡವ ಸಮಾಜದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಪರದಂಡ ಸುಬ್ರಮಣಿ ಕಾವೇರಪ್ಪ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.