ಸುಂಟಿಕೊಪ್ಪ, ಜ. ೫: ಚದುರಂಗ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದರಿಂದ ಕ್ರೀಡಾಪಟುಗಳ ಮಾನಸಿಕತೆ, ಏಕಾಗ್ರತೆ ಹಾಗೂ ಚಿಂತನ ಶೀಲತೆ ಹೆಚ್ಚಾಗುತ್ತದೆ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸುಂಟಿಕೊಪ್ಪದ ಕೂರ್ಗ್ ಚೆಸ್ ಕ್ಲಬ್ ಇವರ ವತಿಯಿಂದ ಶ್ರೀ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಜಿಲ್ಲಾಮಟ್ಟದ ಚದುರಂಗ (ಚೆಸ್) ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚದುರಂಗ ಕ್ರೀಡೆಗೆ ವಯೋಮಾನದ ಮಿತಿ ಇಲ್ಲ. ಹಿರಿಯರು, ಕಿರಿಯರು ಎನ್ನದೆ ಕ್ರೀಡೆಯಲ್ಲಿ ಭಾಗವಹಿಸಬಹುದಾಗಿದೆ.

ಈ ಕ್ರೀಡೆಯಲ್ಲಿ ವೈಯಕ್ತಿಕ ಚಿಂತನಾಶೀಲತೆಯು ಹೆಚ್ಚಾಗುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಡಗೊಳ್ಳಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

೭ ರಿಂದ ೧೪ ವರ್ಷ ಪ್ರಾಯದ ಮಕ್ಕಳ ವಿಭಾಗದಲ್ಲಿ ೪೨ ಮಂದಿ ಪಾಲ್ಗೊಂಡಿದ್ದು, ರೋಶನ್ ಆರ್. ನಾಯಕ್ ಪ್ರಥಮ ಬಹುಮಾನ ರೂ. ೩೦೦೦, ಭೂಷಣ್ ಎಂ.ಆರ್. ದ್ವಿತೀಯ ಬಹುಮಾನ ರೂ. ೨,೦೦೦, ಮಿಲಿದ್ ನಾರಾಯಣ ತೃತೀಯ ಬಹುಮಾನ ರೂ. ೧,೦೦೦ ನಗದು ಬಹುಮಾನ ಹಾಗೂ ಐವರು ಸ್ಪರ್ಧಿಗಳಿಗೆ ಆಕರ್ಷಕ ಟ್ರೋಫಿಗಳನ್ನು ನೀಡಲಾಯಿತು. ೧೫ ವರ್ಷ ಮೇಲ್ಪಟ್ಟವರ ವಿಭಾಗದ ೧೮ ಸ್ಪರ್ಧಿಗಳು ಪಾಲ್ಗೊಂಡಿದ್ದು, ಪಿ. ಶ್ರೀನಿವಾಸ್ ಪ್ರಥಮ ಬಹುಮಾನ ನಗದು ರೂ. ೫,೦೦೦, ರಂಜಿತ್ ಗುರುರಾಜ್ ದ್ವಿತೀಯ ಬಹುಮಾನ ರೂ. ೩,೦೦೦, ಎಸ್. ಅಣ್ಣಯ್ಯ ತೃತೀಯ ಬಹುಮಾನ ರೂ. ೧,೫೦೦ ನಗದು ಬಹುಮಾನ ನೀಡಲಾಯಿತು. ಐವರು ಸ್ಪರ್ಧಿಗಳಿಗೆ ಸಮಾಧಾನಕರ ಟ್ರೋಫಿಯನ್ನು ನೀಡಲಾಯಿತು.