ಮಡಿಕೇರಿ, ಜ. ೫: ಕೊಡಗು ಗೌಡ ಯುವವೇದಿಕೆಯ ಆಶ್ರಯದಲ್ಲಿ ಏಪ್ರಿಲ್ ೨೭ರಿಂದ ಮೇ ೧೭ರ ತನಕ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗೌಡ ಕುಟುಂಬಗಳ ಸಮ್ಮಿಲನ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ. ಈ ಹಿಂದಿನ ವರ್ಷಗಳಂತೆ ಕುಟುಂಬವಾರು ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದೊAದಿಗೆ ತೆಂಗಿನಕಾಯಿ, ಗುಂಡು ಹೊಡೆಯುವ ಸ್ಪರ್ಧೆಯೊಂದಿಗೆ ಇದೇ ಪ್ರಥಮ ಬಾರಿಗೆ ಕುಟುಂಬವಾರು ಸೂಪರ್ ೫ ರಿಂಕ್ ಹಾಕಿ ಪಂದ್ಯಾಟ ಹಾಗೂ ಇದರೊಂದಿಗೆ ವಿಶೇಷ ಆಕರ್ಷಣೆಯಾಗಿ ಮಿಸ್ಟರ್ ಗೌಡ-ಮಿಸ್ ಗೌಡತಿ ಎಂಬ ಸಾಂಸ್ಕೃತಿಕ ಕಲರವದೊಂದಿಗೆ ಗೌಡ ಕುಟುಂಬಗಳ ಸಮ್ಮಿಲನ ಕ್ರೀಡಾಕೂಟ ಸುಮಾರು ೧೮ ದಿನಗಳ ಕಾಲ ವಿಜೃಂಭಣೆಯೊAದಿಗೆ ಜರುಗಲಿದೆ. ನಗರದಲ್ಲಿಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೌಡ ಯುವ ವೇದಿಕೆಯ ಅಧ್ಯಕ್ಷ ಬಾಳಾಡಿ ಮನೋಜ್ ಕುಮಾರ್ ಹಾಗೂ ಪದಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದರು.
ಕೊಡಗು ಗೌಡ ಯುವವೇದಿಕೆ ಕಳೆದ ಹಲವು ವರ್ಷಗಳಿಂದ ಗೌಡ ಜನಾಂಗದ ಒಗ್ಗಟ್ಟು ಮತ್ತು ಜನಾಂಗದ ಅಭಿವೃದ್ಧಿಗಾಗಿ ಕ್ರೀಡೆ, ಸಾಮಾಜಿಕ, ಜನಾಂಗದ ಹಕ್ಕೊತ್ತಾಯ ಮತ್ತು ಸಾಂಸ್ಕೃತಿಕವಾಗಿ ವಿವಿಧ ರೀತಿಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
ಬಾಳಾಡಿ ಮನೋಜ್ ಅವರ ಅಧ್ಯಕ್ಷತೆಯಲ್ಲಿ ಕೊಡಗು ಗೌಡ ವೇದಿಕೆಯ ನೂತನ ಸಮಿತಿ ರಚನೆಯಾಗಿದ್ದು, ಈ ಸಮಿತಿಯಿಂದ ೨೦೨೬ನೇ ವರ್ಷಕ್ಕೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಕಾರ್ಯಯೋಜನೆಯನ್ನು ರೂಪಿಸಿದೆ.
೧೦ ಕುಟುಂಬ ೧೮ ಗೋತ್ರದ ಗೌಡ ಜನಾಂಗದ ೨೭ನೇ ವರ್ಷದ ‘ಗೌಡ ಕುಟುಂಬಗಳ’ ಸಮ್ಮಿಲನ ಕ್ರೀಡಾಕೂಟ ಇದಾಗಿದೆ. ಈ ಕ್ರೀಡಾಕೂಟದಲ್ಲಿ ಕುಟುಂಬವಾರು ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಾಗೂ ಪ್ರಪ್ರಥಮ ಬಾರಿಗೆ ಗೌಡ ಜನಾಂಗ ಬಾಂಧವರಿಗೆ ಕುಟುಂಬವಾರು “ಸೂಪರ್ ೫ ರಿಂಕ್ ಹಾಕಿ” ಕ್ರೀಡಾಕೂಟ, ಗುಂಡು ಹೊಡೆಯುವ ಸ್ಪರ್ಧೆ ಮತ್ತು ಮಿಸ್ಟರ್ ಗೌಡ, ಮಿಸ್ ಗೌಡತಿ ಎಂಬ ಸಾಂಸ್ಕೃತಿಕ ಕಲರವವನ್ನು ಹಮ್ಮಿಕೊಳ್ಳಲಾಗಿದೆ.
ಗೌಡ ಜನಾಂಗದ ಕುಟುಂಬವಾರು ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಬಹಳ ದೊಡ್ಡ ಇತಿಹಾಸ ಇದ್ದು, ಮೊದಲಿಗೆ ಸಾಂಸ್ಕೃತಿಕ ಅಕಾಡೆಮಿ ಮತ್ತು ಕೆದಂಬಾಡಿ ಕುಟುಂಬಸ್ಥರ ನೆರವಿನಿಂದ ೧೯೯೯ ರಲ್ಲಿ ಪ್ರಾರಂಭವಾಯಿತು. ನಂತರದ ದಿನಗಳಲ್ಲಿ ಕೊಡಗು ಗೌಡ ಯುವ ವೇದಿಕೆ ಇದನ್ನು ಮುಂದುವರಿಸುತ್ತಾ ಬಂದಿದೆ. ಗೌಡ ಜನಾಂಗದ ಕ್ರಿಕೆಟ್ ಪಂದ್ಯಾವಳಿಗೆ ೨೯೨ ಕುಟುಂಬಗಳು ಭಾಗವಹಿಸಿರುವುದು ವಿಶೇಷ. ಈ ವರ್ಷವೂ ಕೂಡ ಕುಟುಂಬವಾರು ಕ್ರಿಕೆಟ್ ಪಂದ್ಯಾವಳಿಗೆ ೩೦೦ಕ್ಕೂ ಹೆಚ್ಚು ಕುಟುಂಬಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು
ಅವರುಗಳು ತಿಳಿಸಿದರು. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ)
ರಿAಕ್ ಹಾಕಿ: ಇದೇ ಪ್ರಪ್ರಥಮ ಬಾರಿಗೆ ಗೌಡ ಕುಟುಂಬವಾರು ಹಾಕಿ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದ್ದು, ಇದು ಐದು ಆಟಗಾರರನ್ನು ಒಳಗೊಂಡ ರಿಂಕ್ ಹಾಕಿ ಮಾದರಿಯಲ್ಲಿ ಇರುತ್ತದೆ. ಮೊದಲ ಬಾರಿಗೆ ಸುಮಾರು ೧೦೦ ಕುಟುಂಬಗಳು ಭಾಗವಹಿಸುವ ನಿರೀಕ್ಷೆಯನ್ನು ಹೊಂದಿರುವುದಾಗಿ ಅವರು ಹೇಳಿದರು.
ಸಾಂಸ್ಕೃತಿಕ ಕ್ರೀಡೆ ಆದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ೧೨ನೇ ಬೋರ್, .೨೨ ರೈಫಲ್ ಮತ್ತು ಏರ್ ರೈಫಲ್ ಎಂಬ ಮೂರು ವಿಭಾಗದಲ್ಲಿ ಆಯೋಜನೆ ಮಾಡಲಾಗುವುದು. ಇದರೊಂದಿಗೆ ಮೊದಲ ಬಾರಿಗೆ ಗೌಡ ಜನಾಂಗದ ಯುವ ಪ್ರತಿಭೆಗಳನ್ನು ಹೊರತರಲು “ಮಿಸ್ಟರ್ ಗೌಡ” ಮತ್ತು “ಮಿಸ್ ಗೌಡತಿ” ಎಂಬ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಇಲ್ಲಿ ಸ್ಪರ್ಧಿಯ ಸಂಸ್ಕೃತಿ, ಆಚಾರ ವಿಚಾರ, ಭಾಷೆ ಮತ್ತು ದೈಹಿಕ ಸದೃಢತೆಯನ್ನು ಪರೀಕ್ಷಿಸಿ ವಿಜೇತರನ್ನು ಘೋಷಿಸಲಾಗುತ್ತದೆ.
ಈ ಎಲ್ಲಾ ಸ್ಪರ್ಧೆಗಳಿಗೆ ಆಕರ್ಷಕ ನಗದು ಬಹುಮಾನ ಮತ್ತು ಪಾರಿತೋಷಕಗಳನ್ನು ನೀಡಲಾಗುವುದು ಮತ್ತು ಇದರ ಸಂಪೂರ್ಣ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ವಿವರಿಸಿದರು.
ಕೊಡಗು ಗೌಡ ಯುವವೇದಿಕೆ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೊಫೆಷನಲ್ ಕ್ರಿಕೆಟಿಂಗ್ ಕೆರಿಯರ್ ರೂಪಿಸಿಕೊಳ್ಳಲು ಜಿಪಿಎಲ್ ಸೀಸನ್ ೪ ನ್ನು ಡಿಸೆಂಬರ್ ೧೬ ರಿಂದ ೩೧ ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡದ ಎಲ್ಲಾ ಒಕ್ಕಲಿಗ ಬಾಂಧವರು ಭಾಗವಹಿಸಬಹುದಾಗಿದೆ. ಮತ್ತು ಇದೇ ಸಂದರ್ಭದಲ್ಲಿ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲೂ ಚಿಂತಿಸಲಾಗಿದೆ ಎಂದರು.
ಅನುದಾನದ ನಿರೀಕ್ಷೆ
ಕೊಡಗು ಗೌಡ ಯುವವೇದಿಕೆಯ ಜನಾಂಗದ ಕ್ರೀಡಾಕೂಟಕ್ಕೆ ಸರ್ಕಾರದ ಅನುದಾನ ಬರುತ್ತಿದ್ದು, ೨೦೨೨ ರಿಂದ ಮೂರು ವರ್ಷಗಳ ಕಾಲ ಯಾವುದೇ ಅನುದಾನ ಬಂದಿರುವುದಿಲ್ಲ. ಆದರೂ ಜನಾಂಗದ ಹಿತೈಷಿಗಳ ನೆರವಿನಿಂದ ಕ್ರೀಡಾಕೂಟಗಳನ್ನು ಮುಂದುವರೆಸುತ್ತಾ ಬಂದಿದ್ದೇವೆ. ಸರ್ಕಾರದ ಅನುದಾನ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರ ಗಮನಕ್ಕೆ ತಂದಿದ್ದು, ಅವರು ಈ ವರ್ಷ ಸರ್ಕಾರದ ಅನುದಾನವನ್ನು ಕೊಡಿಸುವ ಭರವಸೆಯನ್ನು ನೀಡಿದ್ದಾರೆ. ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ ಅವರು ಕ್ರೀಡಾಕೂಟಕ್ಕೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಈ ಕಾರ್ಯಕ್ರಮಕ್ಕೆ ಬಹಳಷ್ಟು ಅನುದಾನದ ಅವಶ್ಯಕತೆ ಇದ್ದು, ಮತ್ತೊಮ್ಮೆ ಶಾಸಕರುಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸುವುದಾಗಿ ಹೇಳಿದರು.
ಕುಟುಂಬವಾರು ಟೆನ್ನಿಸ್ ಬಾಲ್ ಕ್ರಿಕೆಟ್ ಹಾಗೂ ಮೊದಲ ಬಾರಿಗೆ ಆಯೋಜನೆಗೊಳ್ಳುತ್ತಿರುವ ರಿಂಕ್ ಹಾಕಿ ಕ್ರೀಡಾಕೂಟಕ್ಕೆ ಕುಟುಂಬಗಳು ಹೆಸರು ನೋಂದಾಯಿಸಲು ಕುಟ್ಟನ ಪ್ರಶಾಂತ್ ೭೦೧೯೬೭೧೧೩೦, ಪೂಜಾರಿರ ಮಿತ್ರ, ೯೬೬೩೨೫೩೦೨೫, ಪರಿಚನ ಸೋನಿ, ೭೬೭೬೪೫೨೧೦೭ “ಮಿಸ್ಟರ್ ಗೌಡ” ಮತ್ತು “ಮಿಸ್ ಗೌಡತಿ” ಸ್ಪರ್ಧೆಗೆ ೯೦೦೮೧೯೮೯೫೫ (ಕಾಂಚನ) ಇವರನ್ನುಸಂಪರ್ಕಿಸಬಹುದು ಎಂದು ಪ್ರಮುಖರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಾಳಾಡಿ ಮನೋಜ್ ಕುಮಾರ್ ಅಧ್ಯಕ್ಷರು, ಕೊಡಗು ಗೌಡ ಯುವ ವೇದಿಕೆ, ಉಪಾಧ್ಯಕ್ಷರಾದ ಪರಿಚನ ಸತೀಶ್, ಎಡಿಕೇರಿ ಪ್ರಸನ್ನ, ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ, ಕಾರ್ಯದರ್ಶಿ ಕೆದಂಬಾಡಿ ಕಾಂಚನ ಗೌಡ, ಅಧ್ಯಕ್ಷರು ಆಹಾರ ಸಮಿತಿ ಪೈಕೇರ ಗಗನ್ ದೇವಯ್ಯ ಉಪಸ್ಥಿತರಿದ್ದರು.