ಐಗೂರು, ಜ. ೫. ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ ೯ರಂದು ಐಗೂರಿನಲ್ಲಿ ನಡೆಯಲಿದ್ದು ಸಮ್ಮೇಳನದ ಸ್ವಾಗತ ಸಮಿತಿಯ ಸಭೆಯು ಐಗೂರಿನ ಕೃಷಿ ಪತ್ತಿನ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಶಾಸಕರು, ಸಮ್ಮೇಳನವು ಅದ್ದೂರಿಯಾಗಿ, ಅರ್ಥಪೂರ್ಣವಾಗಿ ನಡೆಯಬೇಕಾಗಿದ್ದು ಖರ್ಚು ವೆಚ್ಚಗಳ ಬಗ್ಗೆ ನಿಗಾವಹಿಸಿ ಎಂದರು. ಸಮ್ಮೇಳನಕ್ಕೆ ಹಣಕಾಸಿನ ಕ್ರೋಢೀಕರಣ ಮುಖ್ಯವಾಗಿದ್ದು, ಅಂದಾಜು ಬಜೆಟ್ ರೂಪಿಸುವಂತೆ ಹಣಕಾಸು ಸಮಿತಿಯವರಿಗೆ ತಿಳಿಸಿದರು. ಸಮ್ಮೇಳನಕ್ಕೆ ಹೆಚ್ಚು ಜನರನ್ನು ಸೇರಿಸುವ ವ್ಯವಸ್ಥೆ ಆಗಬೇಕು, ಎಲ್ಲಾ ಜನರಿಗೆ ಕುಳಿತುಕೊಳ್ಳುವ ಆಸನದ ವ್ಯವಸ್ಥೆ, ಕಾರ್ಯಕ್ರಮ ವೀಕ್ಷಿಸಲು ಎಲ್ಇಡಿ ಪರದೆಯ ವ್ಯವಸ್ಥೆ ಆಗಬೇಕಾಗಿದೆ. ಸಮ್ಮೇಳನದ ಜೊತೆಗೆ ಸಮ್ಮೇಳನ ನಡೆಯುವ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಸಮ್ಮೇಳನದ ವ್ಯಾಪ್ತಿಯ ೨೪ ಪಂಚಾಯಿತಿಗಳಲ್ಲಿ ಬ್ಯಾನರ್ ಅಳವಡಿಸುವ ಕೆಲಸ ಆಗಬೇಕು. ಸಮ್ಮೇಳನಕ್ಕೆ ಬೇಕಾಗುವ ಹಾಲು, ಮಜ್ಜಿಗೆಯ ವ್ಯವಸ್ಥೆಗಾಗಿ ಈಗಾಗಲೇ ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಸಂಘದವರ ಜೊತೆ ಚರ್ಚಿಸಲಾಗಿದೆ. ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ಇದೆ ಎಂದರು. ಸಭೆಯಲ್ಲಿ ೧೧ ಉಪ ಸಮಿತಿಗಳ ಅಧ್ಯಕ್ಷರು, ಈವರೆಗೆ ಉಪ ಸಮಿತಿಗಳು ಕೈಗೊಂಡ ಕಾರ್ಯವೈಖರಿಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಐಗೂರು ಹೋಬಳಿ ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ. ವಿನೋದ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ತಾಲೂಕು ನಿಕಟಪೂರ್ವ ಅಧ್ಯಕ್ಷ ಜವರಪ್ಪ, ಜೆ.ಸಿ . ಶೇಖರ್, ಗೌರವಕಾರ್ಯದರ್ಶಿ ಎ.ಪಿ. ವೀರರಾಜು, ಕಾರ್ಯದರ್ಶಿ ಜ್ಯೋತಿ ಅರುಣ್, ಕೋಶಾಧ್ಯಕ್ಷ ಕೆ.ಪಿ. ದಿನೇಶ್ ಮತ್ತು ವಿವಿಧ ಸಮಿತಿಗಳ ಪದಾಧಿಕಾರಿಗಳು ಭಾಗವಹಿಸಿದ್ದರು.