ಸೋಮವಾರಪೇಟೆ, ಜ. ೫: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ಉದ್ಯಮ ನಿಧಿ ಅನುದಾನದಡಿ ರೂ. ೮೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಪೇ-ಪಾರ್ಕಿಂಗ್ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು.

ಪಟ್ಟಣದ ವರ್ಕ್ಶಾಪ್ ಏರಿಯಾದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಪೇ ಪಾರ್ಕಿಂಗ್‌ಗೆ ಚಾಲನೆ ನೀಡಿದ ನಂತರ ಮಾತನಾಡಿದ ಶಾಸಕರು, ಸೋಮವಾರಪೇಟೆ ಪಟ್ಟಣದಲ್ಲಿ ವಾಹನ ಸಂಚಾರ ಹೆಚ್ಚಾಗುತ್ತಿದ್ದು, ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆಯಿದೆ. ಇದರಿಂದಾಗಿ ಸಂತೆ ದಿನದಂದು ಪಟ್ಟಣ ಕಿಷ್ಕಿಂಧೆಯAತಾಗುತ್ತಿದ್ದು, ನೂತನ ಘಟಕ ನಿರ್ಮಾಣದಿಂದ ಪಟ್ಟಣದ ಪಾರ್ಕಿಂಗ್ ಸಮಸ್ಯೆ ಬಗೆಹರಿಯಲಿದೆ ಎಂದರು.

ಪಟ್ಟಣದಲ್ಲಿ ರಸ್ತೆಗಳು ಕಿರಿದಾಗಿವೆ. ವಾರದ ಸಂತೆ ದಿನವಾದ ಸೋಮವಾರದಂದು ಗ್ರಾಮೀಣ ಭಾಗದಿಂದ ಸಾರ್ವಜನಿಕರು, ರೈತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣಕ್ಕೆ ಆಗಮಿಸುತ್ತಾರೆ. ಪಟ್ಟಣಕ್ಕೆ ಆಗಮಿಸುವ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆಯಿದ್ದು, ಎಲ್ಲೆಂದರಲ್ಲಿ ನಿಲುಗಡೆಗೊಳಿಸುವುದರಿಂದ ಇತರ ವಾಹನಗಳ ಓಡಾಟಕ್ಕೆ ಅನಾನುಕೂಲವಾಗುತ್ತಿದೆ. ಇದೀಗ ೮೦ ಲಕ್ಷ ವೆಚ್ಚದಲ್ಲಿ ಪೇ ಪಾರ್ಕಿಂಗ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಶೀಘ್ರದಲ್ಲೇ ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರ ಲಭಿಸಲಿದೆ ಎಂದು ಅಭಿಪ್ರಾಯಿಸಿದರು.

ಈ ಹಿಂದೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ, ವರ್ಕ್ಶಾಪ್ ಏರಿಯಾ ಎಂದೇ ಕರೆಯಲ್ಪಡುತ್ತಿದ್ದ ಜಾಗದಲ್ಲಿ ೪೦ಕ್ಕೂ ಅಧಿಕ ವರ್ಕ್ಶಾಪ್‌ಗಳು, ಅಂಗಡಿಗಳು ಸೇರಿದಂತೆ ಇತರ ಕಟ್ಟಡಗಳಿದ್ದವು. ಇದನ್ನು ಪ.ಪಂ. ಮೂಲಕ ತೆರವುಗೊಳಿಸಲಾಗಿದ್ದು, ಇದೇ ಸ್ಥಳದಲ್ಲಿ ಇದೀಗ ಇಂದಿರಾ ಕ್ಯಾಂಟೀನ್ ಕಾರ್ಯಾಚರಿಸುತ್ತಿದೆ. ಉಳಿದ ಸ್ಥಳದಲ್ಲಿ ವೈಜ್ಞಾನಿಕವಾಗಿ ಪೇ ಪಾರ್ಕಿಂಗ್ ಘಟಕ ನಿರ್ಮಾಣವಾದರೆ ಪಟ್ಟಣದ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ದೊರೆಯಲಿದೆ.

ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭ ಪ.ಪಂ. ಮಾಜಿ ಅಧ್ಯಕ್ಷೆ ಜಯಂತಿ ಶಿವಕುಮಾರ್,ಪಿ.ಕೆ. ಚಂದ್ರು, ಸದಸ್ಯರುಗಳಾದ ಶೀಲಾ ಡಿಸೋಜ, ಸಂಜೀವ, ಬಿ.ಆರ್. ಮಹೇಶ್, ಮೋಹಿನಿ, ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ. ಆದಂ, ಪ್ರಮುಖರಾದ ವಿನಿ, ಕಿರಣ್, ರಮೇಶ್, ವೀರರಾಜು, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಇಂಜಿನಿಯರ್ ಹೇಮಕುಮಾರ್ ಸೇರಿದಂತೆ ಇತರರು ಇದ್ದರು.