ಮುಳ್ಳೂರು, ಜ. ೭: ಸಮೀಪದ ಆಲೂರು-ಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಯಿತು.

ಶಾಲಾ ಆಟದ ಮೈದಾನದಲ್ಲಿ ನಡೆದ ಸಂತೆಯಲ್ಲಿ ವಿದ್ಯಾಸಂಸ್ಥೆಯ ಪುಟಾಣಿಗಳು ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಬೆಳೆದ ತರಕಾರಿ, ಸೊಪ್ಪು, ಹಣ್ಣು ಹಂಪಲುಗಳನ್ನು ತಂದು ಮಾರಾಟ ಮಾಡಿದರು. ಶಾಲಾ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆಯ ವಾತಾವರಣ ಪಟ್ಟಣದಲ್ಲಿ ನಡೆಸುವ ಸಂತೆ ಮಾರುಕಟ್ಟೆಯಂತೆ ಕಾಣಿಸುತ್ತಿತ್ತು. ಪೋಷಕರು ಮತ್ತು ಸಾರ್ವಜನಿಕರು ಮಕ್ಕಳ ಸಂತೆಗೆ ಬಂದು ತರಕಾರಿ ಇತರೆ ವಸ್ತುಗಳನ್ನು ಖರೀದಿಸುತ್ತಿದ್ದರು. ಮಕ್ಕಳು ಗ್ರಾಹಕರನ್ನು ತಾವು ತಂದಿರುವ ತರಕಾರಿ, ಸೊಪ್ಪನ್ನು ಖರೀದಿಸುವಂತೆ ಕೂಗಿ ಕರೆಯುತ್ತಿದ್ದರು. ಮಕ್ಕಳ ಸಂತೆಗೆ ಬಂದ ಗ್ರಾಹಕರು ತರಕಾರಿ, ಸೊಪ್ಪು, ತೆಂಗಿನಕಾಯಿ ಮತ್ತಿತ್ತರ ವಸ್ತುಗಳನ್ನು ಖರೀದಿಸುತ್ತಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಸರಿತಾ ಶಿವಪ್ರಕಾಶ್ ಮಾರ್ಗದರ್ಶನದಂತೆ ಮಕ್ಕಳ ಸಂತೆಯಲ್ಲಿ ಸಹ ಶಿಕ್ಷಕರಾದ ಪೂಜಾ, ಜಯಂತಿ, ರಕ್ಷಿತಾ, ಪ್ರಪುಲ್ಲ, ಚೈತ್ರ, ಮಲ್ಲಿಕಾ, ಶ್ವೇತಾ, ಕವನ, ಶಿಲ್ಪ, ಸ್ವಾತಿ, ಸ್ಮಿತಾ ಹಾಗೂ ಪೋಷಕರ ಸಮಿತಿಯವರು ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.