ಮುಳ್ಳೂರು, ಜ. ೬: ಸಮೀಪದ ದುಂಡಳ್ಳಿ ಗ್ರಾ.ಪಂ.ಯ ಸಂಜೀವಿನಿ ಸಭಾಂಗಣದಲ್ಲಿ ದುಂಡಳ್ಳಿ ಗ್ರಾ.ಪಂ. ಹಾಗೂ ಸಿಎಂಸಿಎ ಸಂಸ್ಥೆ ಮತ್ತು ಕೊಡಗು ‘ನಾವು’ ಪ್ರತಿಷ್ಠಾನಾ ಸಂಸ್ಥೆ ವತಿಯಿಂದ ಸದರಿ ಗ್ರಾ.ಪಂ.ವ್ಯಾಪ್ತಿಯ ಶಾಲಾ ಮಕ್ಕಳ ಗ್ರಾಮಸಭೆಯನ್ನು ಆಯೋಜಿಸಲಾಗಿತ್ತು.
ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿ ಮುಬಾಷಿರಾ ಮತ್ತು ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಭವಾನಿಗುರು ಜಂಟಿ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಶಾಲಾ ಮಕ್ಕಳು ಪ್ರಶ್ನೆಗಳ ಸುರಿಮಳೆಗೈದರು.
ಶಾಲೆಗೆ ಬೆಳಿಗ್ಗೆ ಬರುವಾಗ ಮತ್ತು ಸಂಜೆ ಮನೆಗೆ ಹೋಗುವ ಸಮಯದಲ್ಲಿ ಬೈಕ್‌ನಲ್ಲಿ ಬರುವ ಪುಂಡ ಪೋಕರಿಗಳು ವಿದ್ಯಾರ್ಥಿನಿಯರನ್ನು ಚುಡಾಯಿಸಿ ಅಸಭ್ಯ ವರ್ತನೆ ತೋರುತ್ತಾರೆ. ಇದರಿಂದ ನಮಗೆ ಭಯವಾಗುತ್ತಿದ್ದು, ಪೊಲೀಸರು ಇವರ ವಿರುದ್ಧ ಕ್ರಮಕೈಗೊಂಡು ನಮಗೆ ರಕ್ಷಣೆ ನೀಡಬೇಕೆಂದು ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಮುಬಾಷಿರ ಗಂಭೀರ ಸಮಸ್ಯೆಯನ್ನು ಸಭೆಯ ಮುಂದಿಟ್ಟರು.
ಮಾದ್ರೆ ಸರಕಾರಿ ಶಾಲೆಯ ಒಂದನೆ ತರಗತಿ ವಿದ್ಯಾರ್ಥಿನಿ ತಾನ್ವಿಕ ಪಟ್ಟಣದ ಖಾಸಗಿ ಶಾಲಾ ವಾಹನಗಳು ಹಳ್ಳಿಗಳಲ್ಲಿ ಅತೀ ವೇಗವಾಗಿ ಸಂಚರಿಸುತ್ತವೆ. ಇದರಿಂದ ರಸ್ತೆಯಲ್ಲಿ ನಾವು ಶಾಲೆಗೆ ನಡೆದುಕೊಂಡು ಹೋಗುವಾಗ ಮತ್ತು ಮನೆಗೆ ಬರುವಾಗ ಭಯವಾಗುತ್ತಿದೆ ಎಂದು ಗಮನ ಸೆಳೆದಳು. ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಇವುಗಳು ನಮ್ಮ ಮೇಲೆ ಕಚ್ಚಲು ಬರುತ್ತವೆ, ನಮಗೆ ಶಾಲೆಗೆ ಬರಲು ಭಯವಾಗುತ್ತಿದೆ ಎಂದು ವಿದ್ಯಾರ್ಥಿನಿ ಪ್ರೀತಿಶ್ರೀ ಗಮನ ಸೆಳೆದಳು.
ಮಾದ್ರೆ ಶಾಲೆಯ ಬಾಲಕರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಡುವಂತೆ ದೀಕ್ಷ ಮನವಿ ಮಾಡಿದರು. ಖಾಸಗಿ ಶಾಲೆಗೆ ಕಂಪ್ಯೂಟರ್ ವ್ಯವಸ್ಥೆ ಮಾಡುವಂತೆ ಸರಕಾರಿ ಶಾಲೆಗೂ ವ್ಯವಸ್ಥೆ ಮಾಡಿಕೊಡಿ ಎಂದು ಚಿಕ್ಕಕೊಳ್ಳತ್ತೂರು ಶಾಲಾ ವಿದ್ಯಾರ್ಥಿನಿ ಆಗ್ರಹಿಸಿದರು.
ಬಿಳಹ ಸರಕಾರಿ ಶಾಲಾ ಮಕ್ಕಳು, ಶಾಲಾ ಕೊಠಡಿಗಳಿಗೆ ಸುಣ್ಣಬಣ್ಣ ಹೊಡೆಯುವಂತೆ, ಅರ್ಧಕ್ಕೆ ನಿಂತಿರುವ ತಡೆಗೋಡೆಯನ್ನು ಪೂರ್ಣಗೊಳಿಸುವಂತೆ ಮನವಿ ಮಾಡಿದರು. ಮಕ್ಕಳ ಗ್ರಾಮಸಭೆಯಲ್ಲಿ ಶಾಲೆಗೆ ಪೀಠೋಪಕರಣ, ಶಾಲೆಗೆ ಕುಡಿಯುವ ನೀರಿನ ಹೆಚ್ಚುವರಿ ಟ್ಯಾಂಕ್ ನಿರ್ಮಿಸುವಂತೆ, ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವಂತೆ ಮುಂತಾದ ಸಮಸ್ಯೆಗಳನ್ನು ತೆರೆದಿಟ್ಟರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿನಿ ಮುಬಾರಿಷ ಗ್ರಾ.ಪಂ. ಅಧ್ಯಕ್ಷೆ ಭವಾನಿಗುರು ಮತ್ತು ಪಿಡಿಓ ಆಯಿಷಾ ಬಾನು ಮಾತನಾಡಿದರು. ‘ನಾವು’ ಪ್ರತಿಷ್ಠಾನಾ ಸಂಸ್ಥೆಯ ವನಿತಾ ಪ್ರಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಶಾಲಾ ವಿದ್ಯಾರ್ಥಿಗಳಾದ ನಿವೇದಿತಾ, ಯಶನ್, ಶಾಯಿರಾ ಗ್ರಾ.ಪಂ. ಉಪಾಧ್ಯಕ್ಷೆ ಗೋಪಿಕಾ, ಸದಸ್ಯರಾದ ಗಿರೀಶ್, ಬೋಜಪ್ಪ, ನಂದಿನಿ, ಪೊಲೀಸ್ ಸಿಬ್ಬಂದಿ ವಿನಯ್ ಗ್ರಾ.ಪಂ. ಸಿಬ್ಬಂದಿ, ಶಾಲಾ ಶಿಕ್ಷಕರು ಹಾಜರಿದ್ದರು.