ಕಡಂಗ, ಜ. ೭: ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ದುಬೈ ಕನ್ನಡ ಸಂಘವು ಕಳೆದ ಆರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ದುಬೈ ದಸರಾ ಕ್ರೀಡೋತ್ಸವದ ಭಾಗವಾದ ಕರ್ನಾಟಕ ರಾಜ್ಯ ಮಟ್ಟದ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ಅನಿವಾಸಿ ಕೊಡಗಿನ ಯುವಕರು ಜಯ ಸಾಧಿಸಿ ಏಳನೇ ವರ್ಷದ ಚಾಂಪಿಯನ್ ಆಗಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ, ಪಂದ್ಯಾವಳಿಯು ಡಿಸೆಂಬರ್ ೨೧ ರಂದು ದುಬೈಯಲ್ಲಿರುವ ಎಥಿಸಲಾತ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಿತು.

ಪ್ರತಿಷ್ಠಿತ ದುಬೈ ದಸರಾ ಕಪ್ ಕಾಲ್ಚೆಂಡು ಫೈನಲ್ ಪಂದ್ಯದಲ್ಲಿ ಬಲಿಷ್ಠ ಉಳ್ಳಾಲ ಗಯ್ಸ್ ತಂಡವನ್ನು ಪೆನಾಲ್ಟಿ ಶೂಟ್‌ನಲ್ಲಿ ಕೂರ್ಗ್ ಯುನೈಟೆಡ್ ಎಫ್ಸಿ ದುಬೈ ತಂಡವು ಮಣಿಸಿತು. ಕೊಡಗಿನ ತಂಡದ ನಾಯಕನಾಗಿ ರಫೀಕಲಿ ಕುಂಜಿಲ ಅವರು ಮುನ್ನೆಡೆಸಿದರೆ ತಂಡದಲ್ಲಿ ಆಟಗಾರರಾಗಿ ಆಸಿಫ್ ಕುಂಜಿಲ, ಅಫ್ರೀದ್ ಹೊಸಕೋಟೆ, ಜಾಫರ್ ಕಡಂಗ, ಆರಿಫ್ ಕುಂಜಿಲ, ಅಫ್ರಿದ್ ಸುಂಟಿಕೊಪ್ಪ, ತಬಶೀರ್ ಕುಂಜಿಲ, ರಾಝಿಕ್ ಸುಂಟಿಕೊಪ್ಪ, ಶುಹೈಬ್ ಕೊಟ್ಟಮುಡಿ, ಶಂಸಿ ಚಾಮಿಯಾಲ ಅವರು ಗೋಲ್ ಕೀಪರ್ ಆಗಿ ತೊಡಗಿಸಿಕೊಂಡರು. ವಿಜೇತರಿಗೆ ಪ್ರತಿಷ್ಠಿತ ದುಬೈ ದಸರಾ ಚಾಂಪಿಯನ್ಸ್ ಟ್ರೋಫಿ, ಮೆಡಲ್ ಮತ್ತು ಪ್ರಶಸ್ತಿ ನೀಡಲಾಯಿತು.