ಸೋಮವಾರಪೇಟೆ, ಜ. ೭: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ “ತಳಮಟ್ಟದ ಮಾಹಿತಿ ಮತ್ತು ಪಾರದರ್ಶಕತೆ ಉಪಕ್ರಮಕ್ಕಾಗಿ ನ್ಯಾಯ ಜಾಗೃತಿ ಯೋಜನೆ-೨೦೨೫”ರ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ತಾಲೂಕಿನ ಐಗೂರು ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ಹಾಗೂ ಕಾಜೂರು ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸರಕಾರಿ ಕಾನೂನು ನೆರವು ಅಭಿರಕ್ಷಕರಾದ ಹೆಚ್.ಆರ್. ಪವಿತ್ರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಕ್ಕಳ ರಕ್ಷಣೆಗೆ ರೂಪಿಸಲಾದ ಪೋಕ್ಸೊ ಕಾಯ್ದೆ, ಮಾದಕ ದ್ರವ್ಯಗಳ ದುಷ್ಪರಿಣಾಮಗಳು ಹಾಗೂ ಅದರ ವಿರುದ್ಧದ ಕಾನೂನು ಕ್ರಮಗಳು, ಮೋಟಾರ್ ವಾಹನ ಕಾಯ್ದೆಯಲ್ಲಿನ ನಿಯಮಗಳು, ಲೈಂಗಿಕ ಕಿರುಕುಳ ತಡೆ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.

ವಿದ್ಯಾರ್ಥಿಗಳು ಕೇವಲ ಕಾನೂನು ತಿಳಿದುಕೊಳ್ಳುವುದಲ್ಲದೆ, ಸಮಾಜದಲ್ಲಿ ಸುಸಂಸ್ಕೃತ, ಸುಶಿಕ್ಷಿತ ಮತ್ತು ಜವಾಬ್ದಾರಿಯುತ ನಾಗರಿಕರಾಗಿ ಬದುಕುವಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಐಗೂರು ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹೆಚ್.ಕೆ. ಉಮೇಶ್, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಎ. ಯಶ್ವಂತ್ ಕುಮಾರ್, ಸಹ ಶಿಕ್ಷಕರಾದ ಎಸ್.ಎಸ್. ರಂಜಿನಿ, ಪ್ರಾಥಮಿಕ ಶಾಲಾ ಸಹ ಶಿಕ್ಷಕರಾದ ಅನುಸೂಯ ಇದ್ದರು.