ಕಣಿವೆ, ಜ. ೮: ಇಲ್ಲಿನ ಆರ್ಯವೈಶ್ಯ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾದ ವಾಸವಿ ಸಪ್ತಾಹದ ಕೊನೆಯ ದಿನದಂದು ಕುಶಾಲನಗರ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ಸುಮಾರು ೧೫೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿದ ಚಿತ್ರಕಲಾ ನಿವೃತ್ತ ಶಿಕ್ಷಕ ಉಚ್ಚಂಗಿ ನಾಗೇಶ್ ಮಾತನಾಡಿ, ಸಮಸ್ತ ಜೀವಕೋಟಿಗಳನ್ನು ಸಲಹುತ್ತಿರುವ ಪ್ರಕೃತಿ ಮಾತೆಯನ್ನು ಮಕ್ಕಳು ಅರಿಯಬೇಕಿದೆ ಹಾಗೂ ಅರ್ಥ ಮಾಡಿಕೊಂಡು ಸಂರಕ್ಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪರಿಸರ, ಪ್ರಾಣಿ, ಪಕ್ಷಿ, ಗಿಡ ಮರಗಳ ಕುರಿತಾಗಿ ಚಿತ್ರ ಬಿಡಿಸುವ ಸ್ಪರ್ಧೆ ವಿದ್ಯಾರ್ಥಿಗಳಿಗೆ ಬಹಳ ಉಪಯೋಗವಾಗಲಿದೆ ಎಂದರು. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ವಾಸವಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ವೈವಿಧ್ಯಮಯ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದಿವೆ. ಸಾರ್ವಜನಿಕರ ಸಹಭಾಗಿತ್ವ ಸ್ಮರಣೀಯ ಎಂದರು. ಆರ್ಯವೈಶ್ಯ ಮಂಡಳಿ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿದರು. ವಾಸವಿ ಸಪ್ತಾಹ ಕಾರ್ಯಕ್ರಮ ಸಂಚಾಲಕ ಎ.ಎಸ್. ಕುಮಾರ್, ಕಾರ್ಯದರ್ಶಿ ಕೆ. ಪ್ರವೀಣ್, ನಿರ್ದೇಶಕ ವೈಶಾಖ್, ರಾಕೇಶ್, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಮಹೇಶ್, ವಾಸವಿ ಯುವತಿ ಮಂಡಳಿ ಅಧ್ಯಕ್ಷೆ ಅನುಷಾ ಅರ್ಜುನ್, ಬಾಲಕಿಯರ ಮಂಡಳಿ ಅಧ್ಯಕ್ಷೆ ಸಾನ್ವಿ, ಬಾಲಕರ ಮಂಡಳಿ ಅಧ್ಯಕ್ಷ ಶಿಶಿರ್ ಇದ್ದರು. ತೀರ್ಪುಗಾರರಾಗಿ ಡಾ. ಬಿ.ಆರ್. ಶಾಂತಲಕ್ಷಿö್ಮ, ಸುನೀತಾ ಮಹೇಶ್, ಬಿಪಿನ್ ಕಾರ್ಯನಿರ್ವಹಿಸಿದರು.