ಶನಿವಾರಸಂತೆ, ಜ. ೭: ಸಮೀಪದ ಗೋಪಾಲಪುರ ಗ್ರಾಮದ ಶ್ರೀಬನಶಂಕರಿ ಅಮ್ಮನವರ ದೇವಾಲಯದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜಾ ಮಹೋತ್ಸವ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿAದ ಜರುಗಿತು. ಬೆಳಿಗ್ಗೆ ಅರ್ಚಕರಾದ ಮೋಹನ್ ಭಟ್, ಬಾಗೇರಿ ಶಂಕರನಾರಾಯಣ್ ಭಟ್, ಕೆಂಚಮ್ಮನ ಹೊಸಕೋಟೆಯ ರವಿ ಭಟ್, ರಾಜಶೇಖರ ಭಟ್ ಹಾಗೂ ನಾಗೇಶ್ ಭಟ್ ಅವರುಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯ ಆರಂಭವಾಗಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ನಡೆದು ಗಣಪತಿ ಹೋಮ, ನವಗ್ರಹ ಹೋಮ, ದುರ್ಗಾ ಹೋಮ ನೆರವೇರಿತು.ನಂತರ ಶ್ರೀಬನಶಂಕರಿ ಅಮ್ಮನವರಿಗೆ ವಿವಿಧ ಬಗೆಯ ಪುಷ್ಪಾಲಂಕಾರ ಮಾಡಿ, ಪರಿಮಳ ಧೂಪ-ದೀಪ, ಚಾಮರ ಸೇವೆ ಸಲ್ಲಿಸಿ, ಕುಂಕುಮಾರ್ಚನೆ ಮಾಡಲಾಯಿತು. ನೈವೇದ್ಯ ಸಮರ್ಪಿಸಿ, ಮಹಾ ಮಂಗಳಾರತಿಯಾಗಿ ತೀರ್ಥ-ಪ್ರಸಾದ ವಿನಿಯೋಗವಾಯಿತು. ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದ ಗೋಪಾಲಪುರ, ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸ ಲಾಗಿತ್ತು. ಶ್ರೀಬನಶಂಕರಿ ದೇವಾಲಯ ಸಮಿತಿ ಅಧ್ಯಕ್ಷ ಜಿ.ಎಸ್. ಪ್ರಕಾಶ್, ಮಾಜಿ ಅಧ್ಯಕ್ಷ ಜಿ.ಬಿ. ನಾಗಪ್ಪ, ಕಾರ್ಯದರ್ಶಿ ರಾಜಶೇಖರ್, ನಿರ್ದೇಶಕರು ಹಾಜರಿದ್ದರು.