ಶನಿವಾರಸಂತೆ, ಜ. ೮: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶನಿವಾರಸಂತೆ ಪೊಲೀಸ್ ಠಾಣೆ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ನಡೆಯಿತು.
ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್ ಮಾತನಾಡಿ, ವಾಹನ ಚಾಲಕರು ಸಂಚಾರಿ ನಿಯಮ ಪಾಲಿಸಬೇಕು. ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಮೊಬೈಲ್ ಬಳಕೆ ಮಾಡುವುದಾಗಲಿ, ತ್ರಿಬಲ್ ರೈಡ್ ಮಾಡುವುದಾಗಲಿ ಮಾಡಬಾರದು. ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಕೊಡಬಾರದು. ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸಬೇಕು ಎಂದ ಅವರು, ಸಂಚಾರಿ ನಿಯಮಗಳನ್ನು ತಿಳಿಸಿ, ನಿಯಮ ಉಲ್ಲಂಘಿಸಿದವರಿಗೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಂತರ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಗುಡುಗಳಲೆ ವೃತ್ತದವರೆಗೆ ‘ಸಂಚಾರ ನಿಯಮಗಳನ್ನು ಪಾಲಿಸಿ, ಪೊಲೀಸರೊಂದಿಗೆ ಸಹಕರಿಸಿ’ ಎಂಬ ಘೋಷಣೆಯ ಫಲಕ ಹಿಡಿದು ಪೊಲೀಸರು ಮುಖ್ಯರಸ್ತೆಯಲ್ಲಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ವೃತ್ತದಲ್ಲಿ ನಡೆದ ಆಚರಣೆ ಹಾಗೂ ಜಾಥಾದಲ್ಲಿ ಪಿಎಸ್ಐಗಳಾದ ಎಚ್.ವೈ. ಚಂದ್ರ, ಗೋವಿಂದ್ ರಾಜ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.