ಸಿದ್ದಾಪುರ, ಜ. ೮: ಬಾಡಗ-ಬಾಣಂಗಾಲ ಗ್ರಾಮದಲ್ಲಿ ಹುಲಿ ದಾಳಿ ಮುಂದುವರೆದಿದ್ದು, ಬಾಡಗ-ಬಾಣಂಗಾಲ ಗ್ರಾಮದ ಮಠದ ನಿವಾಸಿ ಶರ್ಲಿ ಎಂಬವರಿಗೆ ಸೇರಿದ ಉತ್ತಮ ತಳಿಯ ಹಸುವನ್ನು ಬಲಿ ತೆಗೆದುಕೊಂಡಿದೆ.
ಶರ್ಲಿ ಅವರು ತಮ್ಮ ಗದ್ದೆಯಲ್ಲಿ ಹಸುವನ್ನು ಮೇಯಲು ಬಿಟ್ಟಿದ್ದರು. ಮೇಯಲು ಬಿಟ್ಟ ಹಸುವನ್ನು ಮಧ್ಯಾಹ್ನದ ನಂತರ ನೋಡಲು ಹೋದ ಸಂದರ್ಭ ಹಸು ಕಾಣೆಯಾಗಿತ್ತು. ಬಳಿಕ ಹಸುವನ್ನು ಹುಡುಕಿಕೊಂಡು ಹೋದಾಗ ಸಮೀಪದ ಚೌಡಿಕಾಡು ಕಾಫಿ ತೋಟದೊಳಗೆ ಹಸುವಿನ ಮೃತದೇಹ ಪತ್ತೆಯಾಗಿದೆ. ಹುಲಿ ಹಸುವಿನ ಮೇಲೆ ದಾಳಿ ನಡೆಸುವ ಮುನ್ನ ಹಸುವನ್ನು ಅಟ್ಟಾಡಿಸಿಕೊಂಡು ಹೋಗಿರುವ ಕುರುಹುಗಳು ಪತ್ತೆಯಾಗಿದೆ.
ಶರ್ಲಿ ಅವರು ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹುಲಿಯಿಂದ ಹಸು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕರು ತಬ್ಬಲಿಯಾಗಿದೆ.
ಹುಲಿಯ ಚಲನವಲನವನ್ನು ಕಂಡುಹಿಡಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹುಲಿಯನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಬಾಡಗ-ಬಾಣಂಗಾಲ ಗ್ರಾಮ ವ್ಯಾಪ್ತಿಯ ಮಠದ ಖಾಸಗಿ ತೋಟದಲ್ಲಿ ಬೋನ್ ಇರಿಸಿದ್ದರು. ಆದರೆ ಹುಲಿ ಅತ್ತ ಸುಳಿಯದೆ ಬೇರೆ ದಿಕ್ಕಿನಲ್ಲಿ ಸಂಚರಿಸುತ್ತಾ ಹಸುಗಳನ್ನು ಕೊಂದು ಹಾಕುತ್ತಿತ್ತು.
ಇದೀಗ ಮತ್ತೆ ಹುಲಿ ಸೆರೆಗೆ ಕಾಫಿ ತೋಟದೊಳಗೆ ಬೋನ್ ಇರಿಸಲಾಗಿದೆ. ಸ್ಥಳಕ್ಕೆ ತಿತಿಮತಿ ವಲಯದ ಎ.ಸಿ.ಎಫ್. ಗೋಪಾಲ್ ಮತ್ತು ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬಾಡಗ-ಬಾಣಂಗಾಲ ಗ್ರಾಮ ವ್ಯಾಪ್ತಿಯ ಮಠದಲ್ಲಿ ಮುಂದುವರಿದ ಹುಲಿ ದಾಳಿಯಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಕಾರ್ಮಿಕರು ಹಾಗೂ ಶಾಲಾ-ಕಾಲೇಜುಗಳಿಗೆ ತೆರಳುವ ಮಕ್ಕಳಿಗೂ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ತಂಡದ ಸಿಬ್ಬಂದಿ, ಆರ್ಆರ್ಟಿ ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿಗಳು ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಭಾಗದಲ್ಲಿ ಕಾಡಾನೆಗಳು ಕೂಡ ಸಂಚರಿಸುತ್ತಿದ್ದು ಹುಲಿ ಹಾಗೂ ಕಾಡಾನೆಗಳಿಗೆ ಕಾರ್ಯಾಚರಣೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. - ವಾಸು