ಕೂಡಿಗೆ, ಜ. ೮: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ನಾಲೆಯ ಮುಖ್ಯ ದ್ವಾರದಿಂದ ೨೦೦ ಮೀಟರ್ ಅಂತರದಲ್ಲಿರುವ ಮುಖ್ಯ ನಾಲೆಯ ಕಾಮಗಾರಿಯು ನಡೆದು ಒಂದು ವರ್ಷ ಕಳೆಯುವದರ ಒಳಗೆ ನಾಲೆಯು ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ಹಾರಂಗಿಯ ಮುಖ್ಯ ನಾಲೆಯಲ್ಲಿ ನಡೆದಿದೆ.
ಕಳೆದ ವರ್ಷ ರೂ. ೫೦ಕೋಟಿ ವೆಚ್ಚದಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ ಟೆಂಡರ್ ಪ್ರಕ್ರಿಯೆ ನಡೆದು ಅಣೆಕಟ್ಟೆಯ ಸಮೀಪದ ಒಂದನೆಯ ತೂಬಿನಿಂದ ೬ ತೂಬಿನವರೆಗೆ ಕಾಮಗಾರಿ ನಡೆದಿತ್ತು. ಆದರೆ ಅಣೆಕಟ್ಟೆ ಸಮೀಪದ ಮುಖ್ಯ ನಾಲೆ ತಳ ಭಾಗದಲ್ಲಿ ೧೫ರಿಂದ ೨೦ಮೀಟರ್ಗಳಷ್ಟು ಅಂತರ ಒಂದೇ ವರ್ಷಕ್ಕೆ ಕಾಂಕ್ರೀಟ್ ಸಂಪೂರ್ಣವಾಗಿ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಟೆಂಡರ್ ಅನ್ನು ಆಂಧ್ರಪ್ರದೇಶದ ಅಮೃತ್ ಕಂಪನಿಯವರು ಗುತ್ತಿಗೆ ಪಡೆದು ಕಾಮಗಾರಿ ನಡೆಸಿರುತ್ತಾರೆ. ಮುಖ್ಯ ನಾಲೆ ತಳ ಭಾಗದ ಕಾಂಕ್ರಿಟ್ ಕಾಮಗಾರಿಯು ಕೊಚ್ಚಿ ಹೋಗಿರುವುದನ್ನು ಸಂಬAಧಿಸಿದ ಗುತ್ತಿಗೆದಾರ ಸರಿಪಡಿಸುವಂತೆ ಅಚ್ಚುಕಟ್ಟು ಪ್ರದೇಶದ ರೈತರು ಆಗ್ರಹಿಸಿದ್ದಾರೆ.