ಮಡಿಕೇರಿ, ಜ. ೭: ಕೇರಳ ಕಣ್ಣೂರು ಜಿಲ್ಲೆಯ ಇರಿಟ್ಟಿಯ ಉಳಿಕಲ್ ನಲ್ಲಿ ಕೇರಳಿಗರು ಹಾಗೂ ಕೊಡಗಿನವರು ಸೇರಿ ಒಂದಾಗಿ ನಡೆಸುವ ಬೈತೂರಪ್ಪನ ವಾರ್ಷಿಕ ಉತ್ಸವದ ಕೋಮರತಚ್ಚನ್ ಮಡಿಕೇರಿ ಓಂಕಾರೇಶ್ವರಕ್ಕೆ ಭೇಟಿ ನೀಡಿತು. ತಾ.೨೪ ರಂದು ಬೈತೂರಿನಲ್ಲಿ ಉತ್ಸವ ನಡೆಯುವ ಹಿನ್ನೆಲೆ ಕೊಡಗಿನ ಜನರನ್ನು ಆಹ್ವಾನಿಸುವ ಸಂಪ್ರದಾಯದ ಅಂಗವಾಗಿ ಇಂದು ಓಂಕಾರೇಶ್ವರ ಸನ್ನಿಧಿಗೆ ಕೋಮರತಚ್ಚನ್ ಆಗಮಿಸಿದ್ದು ವಿಶೇಷ ಪೂಜೆ ಸಲ್ಲಿಸಲಾಯಿತು.

ಶ್ರೀ ಓಂಕಾರೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಕೋಟೆ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಪೂಜೆ ಪ್ರಾರ್ಥನೆ ನೆರವೇರಿಸಲಾಯಿತು. ಅನಂತರ ಜಿಲ್ಲಾಡಳಿತದಿಂದ ನೂತನ ಜಿಲ್ಲಾಧಿಕಾರಿ ಸೋಮಶೇಖರ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಅವರುಗಳು ಗೌರವ ಸಲ್ಲಿಸಿ ಕೋಮರತಚ್ಚನ್ ಆಶೀರ್ವಾದ ಪಡೆದು ಬೀಳ್ಕೊಟ್ಟರು. ಮಡಿಕೇರಿ ಶ್ರೀ ಓಂಕಾರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ, ಸದಸ್ಯರಾದ ಅರ್ಚಕ ಸಂತೋಷ್ ಭಟ್, ಅರ್ಚಕ ವೃಂದ ಹಾಗೂ ಇತರ ಸದಸ್ಯರು ಹಾಗೂ ಮಡಿಕೇರಿ ಕೊಡವ ಸಮಾಜದ ಪ್ರಮುಖರು, ವಿವಿಧ ಕೇರಿ ಮುಖ್ಯಸ್ಥರು, ಸ್ವಾಮಿ ಸೋಮನಾಥನಂದಪುರಿ ಹಾಗೂ ಪುಗ್ಗೇರ ಕುಟುಂಬದ ತಕ್ಕರಾದ ಪೊನ್ನಪ್ಪ ಹಾಗೂ ಇತರ ಪ್ರಮುಖರು ಹಾಜರಿದ್ದರು.