ಸೋಮವಾರಪೇಟೆ, ಜ. ೭: ಠಾಣಾ ವ್ಯಾಪ್ತಿಗೆ ಒಳಪಡುವ ಕಾಫಿ ಬೆಳೆಗಾರರೊಂದಿಗೆ ಪೊಲೀಸ್ ಇಲಾಖೆ ಸಭೆ ನಡೆಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳು ವಂತೆ ಸೂಚಿಸಲಾಯಿತು.
ಇಲ್ಲಿನ ಠಾಣೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಾದೇವ ಅವರು, ಪ್ರಸ್ತುತ ಕಾಫಿ ಕೊಯ್ಲು ಪ್ರಗತಿಯಲ್ಲಿದ್ದು, ಸಾವಿರಾರು ಸಂಖ್ಯೆಯ ಕಾರ್ಮಿಕರು ಹೊರ ಭಾಗದಿಂದ ಕೆಲಸಕ್ಕೆ ಆಗಮಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಫಿ ಬೆಳೆಗಾರರು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದ ಎಂದರು.
ತಮ್ಮ ತೋಟಗಳಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರು, ಲೈನ್ ಮನೆಯಲ್ಲಿ ನೆಲೆಸಿರುವ ಕಾರ್ಮಿಕರ ಬಗ್ಗೆ ಮಾಲೀಕರು ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಕಾಫಿ ಕೊಯ್ಲು ನಂತರ ಕಣದಲ್ಲಿ ಒಣಗಿಸಲು ಹಾಕುವ ಕಾಫಿಯನ್ನು ಕಾವಲು ಕಾಯಲು ಸಿಬ್ಬಂದಿ ನಿಯೋಜಿಸಬೇಕು. ಸಿ.ಸಿ. ಕ್ಯಾಮೆರಾಗಳನ್ನು ಕಣಕ್ಕೆ ಅಳವಡಿಸಿದರೆ ಉತ್ತಮ ಎಂದು ಸಲಹೆ ನೀಡಿದರು.
ಇದರೊಂದಿಗೆ ತೋಟ ಗಳಲ್ಲಿ ಕೆಲಸ ಮಾಡುವ ಕೆಲವು ಕಾರ್ಮಿಕರು ತಮ್ಮ ಮಕ್ಕಳನ್ನೂ ಕರೆ ತರುತ್ತಿದ್ದಾರೆ. ಈ ಮಕ್ಕಳ ಬಗ್ಗೆಯೂ ತೋಟ ಮಾಲೀಕರು ಗಮನ ಹರಿಸಬೇಕು ಎಂದ ಮುದ್ದು ಮಾದೇವ ಅವರು, ಮೊನ್ನೆದಿನ ಚಿಕ್ಕತೋಳೂರು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ದಂಪತಿಗಳ ೭ ಹಾಗೂ ೪ ವರ್ಷದ ಈರ್ವರು ಮಕ್ಕಳು, ತೋಟದೊಳಗೆ ೨ ಕಿ.ಮೀ. ನಡೆದುಕೊಂಡು ಹೋಗಿ, ರಾತ್ರಿಯಿಡೀ ಕೌಕೋಡಿ ಎಸ್ಟೇಟ್‌ನಲ್ಲಿ ಕಾಲ ಕಳೆದಿದ್ದಾರೆ. ಇಂತಹ ಪ್ರಮಾದಗಳಿಗೆ ಮುಂದಕ್ಕೆ ಅವಕಾಶ ನೀಡಬಾರದು ಎಂದು ವಿವರಿಸಿದರು.
ಹೊರ ಭಾಗದಿಂದ ಆಗಮಿಸಿದ ತಮ್ಮ ತೋಟಗಳಲ್ಲಿ ಖಾಯಂ ಹಾಗೂ ತಾತ್ಕಾಲಿಕವಾಗಿ ನೆಲೆಸುವ ಕಾರ್ಮಿಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಠಾಣೆಗೆ ಒದಗಿಸಬೇಕೆಂದು ಸೂಚಿಸಿದರ ಅವರು, ಕಾರ್ಮಿಕರ ಮಕ್ಕಳನ್ನು ನೋಡಿಕೊಳ್ಳಲು ಮಾಲೀಕರೇ ವ್ಯವಸ್ಥೆ ಮಾಡಬೇಕೆಂದು ನಿರ್ದೇಶಿಸಿದರು.