ಶ್ರೀಮಂಗಲ, ಜ. ೭: ೧೨೫ನೇ ವರ್ಷದ ಸಂಭ್ರಮದಲ್ಲಿರುವ ಪೊನ್ನಂಪೇಟೆ ತಾಲೂಕಿನ ಬಾಡಗರಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿಯೊಂದರ ಗೋಡೆ ಕುಸಿಯುತ್ತಿರುವುದು ಆತಂಕ ಮೂಡಿಸಿದೆ.
ಇದರಿಂದ ಶಾಲೆಯ ವಾತಾವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಓಡಾಡಲು ಭಯಪಡುವಂತ ಸ್ಥಿತಿ ಸೃಷ್ಟಿಯಾಗಿದ್ದು, ಯಾವ ಘಳಿಗೆಯಲ್ಲಾದರೂ ಗೋಡೆ ಕುಸಿಯುವ ಭೀತಿ ಕಾಡುತ್ತಿದೆ. ಇದರೊಂದಿಗೆ ಇಡೀ ತರಗತಿ ಕಟ್ಟಡ ಕುಸಿದು ಬೀಳುವ ಅಪಾಯವೂ ಎದುರಾಗಿದೆ. ಇದರಿಂದ ಶಾಲಾ ಅಭಿವೃದ್ಧಿ ಮಂಡಳಿ ಹಾಗೂ ಶಿಕ್ಷಕರು ಕುಸಿಯುವ ಹಂತದಲ್ಲಿರುವ ತರಗತಿಯಿಂದ ಅನಿವಾರ್ಯವಾಗಿ ಮಕ್ಕಳನ್ನು ಬೇರೆ ತರಗತಿಗೆ ಸ್ಥಳಾಂತರಿಸಿದ್ದು, ತರಗತಿಯ ಕೊರತೆ ಉಂಟಾಗಿದೆ. ಬಾಡಗರಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ೭ನೇ ತರಗತಿವರೆಗೆ ಒಟ್ಟು ೭೩ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಟಿ. ಶೆಟ್ಟಿಗೇರಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬಾಡಗರಕೇರಿ ಹಾಗೂ ಟಿ. ಶೆಟ್ಟಿಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಈ ವರ್ಷದಿಂದ ಸರಕಾರದ ಆದೇಶದಂತೆ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಪಠ್ಯಕ್ರಮ ಆರಂಭಿಸಿದೆ. ೧೯೦೦ರಲ್ಲಿ ಸ್ಥಾಪನೆಯಾದ ಶಾಲೆ ಇದೀಗ ೧೨೫ ವರ್ಷ ವರ್ಷದ ಸಂಭ್ರಮಚರಣೆಯಲ್ಲಿದ್ದು, ಜನವರಿ ೨೬ರಂದು ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಮೈದಾನವನ್ನು ಸಹ ಆಗಲೀಕರಣ ಮಾಡುವ ಯೋಜನೆಯನ್ನು ಸಹ ಶಾಲಾ ಅಭಿವೃದ್ಧಿ ಮಂಡಳಿ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘ ಹಮ್ಮಿಕೊಂಡಿದೆ. ಇದೀಗ ಶಿಕ್ಷಣ ಇಲಾಖೆಗೆ ಹಾಗೂ ಗ್ರಾಮ ಪಂಚಾಯಿತಿಗೆ ಶಾಲಾ ಅಭಿವೃದ್ಧಿ ಮಂಡಳಿಯಿAದ ಮನವಿ ಸಲ್ಲಿಸಲಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಂಜಿನಿಯರ್‌ಗಳ ಮೂಲಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಕಟ್ಟಡವನ್ನು ಪೂರ್ತಿಯಾಗಿ ತೆರವುಗೊಳಿಸುವುದು ಅಥವಾ ದುರಸ್ತಿಗೊಳಿಸುವ ಬಗ್ಗೆ ಯಾವುದೇ ನಿರ್ಧಾರವಿದ್ದರೂ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ. - ಹರೀಶ್ ಮಾದಪ್ಪ