ಸೋಮವಾರಪೇಟೆ, ಜ. ೮: ಜಾತ್ಯತೀತ ಜನತಾದಳ ಪಕ್ಷದ ಬಹುತೇಕ ಪದಾಧಿಕಾರಿಗಳ ಗಮನಕ್ಕೆ ಬಾರದಂತೆ ಕೆಲವೇ ಮಂದಿ ಜೆಡಿಎಸ್ ಹಂಗಾಮಿ ಜಿಲ್ಲಾಧ್ಯಕ್ಷರ ಅಯ್ಕೆ ಮಾಡಿರುವುದು ನಿಯಮಬಾಹಿರವಾಗಿದೆ ಎಂದು ಪಕ್ಷದ ಜಿಲ್ಲಾ ವಕ್ತಾರ ಕಾಟ್ನಮನೆ ವಿಠಲ್‌ಗೌಡ ಆರೋಪಿಸಿದ್ದಾರೆ.

ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.೫ರಂದು ಕುಶಾಲನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಪಕ್ಷದ ಸಂಘಟನೆ ಸಂಬAಧಿತ ಸಭೆಯಲ್ಲಿ ಏಕಾಏಕಿ ಹಂಗಾಮಿ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭ ಕಾರ್ಮಾಡು ಸುಬ್ಬಣ್ಣ ಅವರನ್ನು ಜೆಡಿಎಸ್ ಹಂಗಾಮಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡುವುದಾಗಿ ಘೋಷಣೆ ಮಾಡಿದ ಸಂದರ್ಭ, ಹಲವಷ್ಟು ಮಂದಿ ವಿರೋಧ ವ್ಯಕ್ತಪಡಿಸಿ, ಸಭೆಯಿಂದ ವಾಪಸ್ ಬಂದಿರುವುದಾಗಿ ವಿಠಲ್ ಗೌಡ ಹೇಳಿದರು.

ಹಲವಷ್ಟು ಮುಖಂಡರು ಹಾಗೂ ಕಾರ್ಯಕರ್ತರ ವಿರೋಧದ ನಡುವೆಯೂ ದಿಢೀರಾಗಿ ನಡೆಸಿದ ಈ ಆಯ್ಕೆಯನ್ನು ಪಕ್ಷದ ಮುಂಚೂಣಿ ಕಾರ್ಯಕರ್ತರು ಒಪ್ಪುವುದಿಲ್ಲ. ಜೆಡಿಎಸ್ ಪಕ್ಷ ಕಾರ್ಯಕರ್ತರ ಪಕ್ಷವಾಗಿದ್ದು, ಎಲ್ಲರ ಅಭಿಪ್ರಾಯ ಪಡೆದು ಅಧ್ಯಕ್ಷರ ಆಯ್ಕೆ ನಡೆಯಬೇಕು ಎಂದರು.

ಈ ಹಿಂದೆ ಜಿಲ್ಲಾಧ್ಯಕ್ಷರು ರಾಜೀನಾಮೆ ನೀಡಿರುವುದರಿಂದ, ಜಿಲ್ಲಾಧ್ಯಕ್ಷ ಸ್ಥಾನ ಖಾಲಿಯಿತ್ತು. ಆದರೆ ಉಳಿದ ಪದಾಧಿಕಾರಿಗಳು ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಅನೇಕ ಪದಾಧಿಕಾರಿಗಳಿಗೆ ಮಾಹಿತಿಯನ್ನು ನೀಡದೆ, ಸಭೆ ಕರೆದಿದ್ದಾರೆ. ಸೋಮವಾರಪೇಟೆಯ ಸ್ವಯಂಘೋಷಿತ ನಾಯಕನೋರ್ವನ ಚಿತಾವಣೆಯಿಂದ ಇಂತಹ ಅಭಾಸಗಳು ಪಕ್ಷದೊಳಗೆ ನಡೆಯುತ್ತಿವೆ ಎಂದು ದೂರಿದರು.

ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಸೋಮವಾರಪೇಟೆಯ ಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ಸಭೆ ಕರೆದು, ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ, ಜೆಡಿಎಸ್ ಹೈಕಮಾಂಡ್‌ಗೆ ಕಳುಹಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ವಿಠಲ್ ಗೌಡ ಹೇಳಿದರು.

ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಕೆ.ಟಿ.ಪರಮೇಶ್ ಮಾತನಾಡಿ, ಪಕ್ಷದ ಸಂಘಟನೆಯಲ್ಲಿ ಮುಂದಾಗದ ಕೆಲ ನಾಯಕರುಗಳು ಚುನಾವಣೆ ಸಂದರ್ಭ ಮಾತ್ರ ಕಾರ್ಯಾಚರಣೆಗೆ ಇಳಿಯುತ್ತಾರೆ. ನಂತರ ಪಕ್ಷವನ್ನು ಮರೆಯುತ್ತಾರೆ. ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪ್ರಾರಂಭವಾಗುವ ಲಕ್ಷಣಗಳು ಗೋಚರಿಸುತ್ತಿರುವುದರಿಂದ ಸಭೆ ನಡೆಸಿ, ನಿಯಮ ಬಾಹಿರ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದು ಪಕ್ಷದ ಸಂಘಟನೆಗೆ ಹಾನಿಯಾಗುತ್ತಿದೆ. ಹಂಗಾಮಿ ಅಧ್ಯಕ್ಷರ ಆಯ್ಕೆಯನ್ನು ಒಪ್ಪುವುದಿಲ್ಲ ಎಂದು ಹೇಳಿದರು.

ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂದಣ್ಣ, ಸಂಘಟನಾ ಕಾರ್ಯದರ್ಶಿ ಆನಂದ್, ಹಿರಿಯ ಮುಖಂಡ ಹೊಸಬೀಡು ಹೂವಯ್ಯ ಇದ್ದರು.