ಪೊನ್ನAಪೇಟೆ, ಜ. ೮ : ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಮಧ್ಯಪ್ರದೇಶ ರಾಜ್ಯದ ಗೂನಾದಲ್ಲಿ ನಡೆದ ೧೪ ವರ್ಷ ಒಳಗಿನವರ ರಾಜ್ಯಮಟ್ಟದ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಕೊಡಗಿನ ಅವಳಿ ಸಹೋದರರಾದ ಮಿನ್ನಂಡ ಲಿಖಿತ್ ಚಿಣ್ಣಪ್ಪ ಹಾಗೂ ಲೇಖಕ್ ಚಂಗಪ್ಪ ಅವರ ಪೈಕಿ ಲಿಖಿತ್ ಚಿಣ್ಣಪ್ಪ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ನಡೆದ ೧೪ ವರ್ಷ ಒಳಗಿನವರ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದ ಪರ ಪದಕ ಪಡೆದ ಪ್ರಪ್ರಥಮ ಬಾಕ್ಸಿಂಗ್ ಪಟು ಎಂಬ ಕೀರ್ತಿಗೆ ಲಿಖಿತ್ ಚಿಣ್ಣಪ್ಪ ಭಾಜನರಾಗಿದ್ದು, ಈ ಸಾಧನೆಗೆ ಕರ್ನಾಟಕ ಸರ್ಕಾರ ನಗದು ಬಹುಮಾನ ಘೋಷಣೆ ಮಾಡಿದೆ. ಈ ಅವಳಿ ಸಹೋದರರು ಅರ್ವತೋಕ್ಕಲು ಸರ್ವದೈವತಾ ಶಾಲೆಯಲ್ಲಿ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಗೋಣಿಕೊಪ್ಪಲು ಕಾವೇರಿ ಕಾಲೇಜು ಹಾಕಿ ತರಬೇತುದಾರ ಮಿನ್ನಂಡ ಜೋಯಪ್ಪ ಹಾಗೂ ಪ್ರೀತ್ ಜೋಯಪ್ಪ ದಂಪತಿಯ ಪುತ್ರರಾಗಿದ್ದಾರೆ. ಕೊಡಗು ಬಾಕ್ಸಿಂಗ್ ಅಕಾಡೆಮಿಯ ಮುಖ್ಯಸ್ಥರಾದ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಅವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ, ತರಬೇತುದಾರರಾದ ದೇಯಂಡ ಮೇದಪ್ಪ ಹಾಗೂ ಶರತ್ ನಾಯ್ಡು ಇವರಿಗೆ ತರಬೇತಿ ನೀಡುತ್ತಿದ್ದಾರೆ.