ಮಡಿಕೇರಿ, ಜ. ೮: ದುರುಪಯೋಗ ತಪ್ಪಿಸಿ, ಅಭಿವೃದ್ಧಿಗೆ ವ್ಯವಸ್ಥಿತ ಚೌಕಟ್ಟು ನೀಡುವ ಸಲುವಾಗಿ ವಿಕಸಿತ ಭಾರತ ಉದ್ಯೋಗ ಮತ್ತು ಜೀವನೋಪಾಯ ಭರವಸೆ ಮಿಷನ್ (ವಿಬಿ - ಜಿ ರಾಮ್ ಜಿ) ಮಸೂದೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು, ಇದರಿಂದ ಹಲವಷ್ಟು ಲಾಭವಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆ (ಮನರೇಗ) ಜಾರಿಯಲ್ಲಿತ್ತು. ರೈತರು ಗುಳೆ ಹೋಗುವುದನ್ನು ತಪ್ಪಿಸುವ ಸದುದ್ದೇಶದಿಂದ ಅಂದಿನ ಯುಪಿಎ ಸರಕಾರ ಯೋಜನೆಯನ್ನು ಅನುಷ್ಠಾನ ಮಾಡಿತ್ತು. ಅನಂತರ ಜಾಬ್ ಕಾರ್ಡ್ ನೀಡುವ ವ್ಯವಸ್ಥೆಯೂ ಇತ್ತು. ಆದರೆ, ಜಾಬ್ ಕಾರ್ಡ್ ಮೂಲಕ ಹಣ ದುರುಪಯೋಗ ಅಧಿಕ ಪ್ರಮಾಣದಲ್ಲಿ ನಡೆಯುತ್ತಿತ್ತು. ಇದನ್ನು ಪತ್ತೆಹಚ್ಚುವುದು ಅಸಾಧ್ಯ ಎಂಬ ಸ್ಥಿತಿಯೂ ಸೃಷ್ಟಿಯಾಗಿತ್ತು. ಇತ್ತೀಚಿಗೆ ಮಕ್ಕಳನ್ನು ಕಾರ್ಮಿಕರೆಂದು ಬಿಂಬಿಸಿ ಹಣ ದುರುಪಯೋಗ ಪ್ರಕರಣವೂ ವರದಿಯಾಗಿತ್ತು. ನಮ್ಮ ಸರಕಾರಕ್ಕೂ ದುರುಪಯೋಗ ಪತ್ತೆ ಸಾಧ್ಯವಾಗಿರಲಿಲ್ಲ. ಸರಕಾರದ ಹಣ ಪೋಲಾಗುತ್ತಿತ್ತು. ಇವೆಲ್ಲವನ್ನು ತಪ್ಪಿಸಿ ಎಲ್ಲಾ ರಾಜ್ಯಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ಮಸೂದೆಯನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ ಮಂಡಿಸಿ ಇದೀಗ ಅನುಮೋದನೆ ಪಡೆದುಕೊಂಡಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ವ್ಯವಸ್ಥಿತ ಸ್ಪರ್ಶ ಸಿಗಲಿದೆ ಎಂದು ಹೇಳಿದರು.
ವ್ಯವಸ್ಥಿತ ಚೌಕಟ್ಟು
ಜಿ ರಾಮ್ ಜಿ ಯೋಜನೆ ಮೂಲಕ ಕೆಲಸದ ದಿನಗಳನ್ನು ಹೆಚ್ಚಿಸಲಾಗಿದೆ. ಮೊದಲು ೧೦೦ ದಿನವಿದ್ದ ದಿನವನ್ನು ೧೨೫ಕ್ಕೆ ಏರಿಕೆ ಮಾಡಲಾಗಿದೆ. ಇದರೊಂದಿಗೆ ಪಾರದರ್ಶಕತೆಯನ್ನು ಒಳಗೊಂಡಿರುತ್ತದೆ. ಮೊದಲು ನಕಲಿ ಬಿಲ್ಗಳು ತೋರಿಸಿ ಅಕ್ರಮಗಳು ನಡೆಯುತ್ತಿದ್ದವು. ಇದೀಗ ತಂತ್ರಜ್ಞಾನ ಬಳಕೆಯ ಸಹಾಯದಿಂದ ದುರುಪಯೋಗ ತಪ್ಪಿಸಲು ಕ್ರಮವಹಿಸಲಾಗಿದೆ. ಮೊದಲು ಕೆಲಸಕ್ಕೆ ಸ್ಪಷ್ಟ ವರ್ಗೀಕರಣವಿರಲಿಲ್ಲ. ಮಾರ್ಗಸೂಚಿಯ ಕೊರತೆಯಿತ್ತು. ಇದೀಗ ವಿವಿಧ ಗುಂಪುಗಳಾಗಿ ವರ್ಗೀಕರಿಸಿ ೨೬೬ ವಿವಿಧ ಕಾಮಗಾರಿಗಳನ್ನು ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಒಂದುಗೂಡಿಸಲಾಗಿದೆ. ಕೆಲಸಕ್ಕೆ ಮುನ್ನ ಮತ್ತು ನಂತರದ ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕಾಗಿದೆ. ಇದರೊಂದಿಗೆ ವಾರಕ್ಕೊಮ್ಮೆ ಲೆಕ್ಕಪರಿಶೋಧನೆ, ನಿಗದಿತ ಸಮಯಕ್ಕೆ ಸಾಮಾಜಿಕ ಲೆಕ್ಕಪರಿಶೋಧನೆ ನಡೆಯುವುದರಿಂದ ಪಾರದರ್ಶಕತೆ ಪೂರ್ಣ ಪ್ರಮಾಣದಲ್ಲಿರುತ್ತದೆ ಎಂದು ಪ್ರತಾಪ್ ಸಿಂಹ ಮಾಹಿತಿ ನೀಡಿದರು.
ರಾಜ್ಯಕ್ಕೆ ಅನುಗುಣವಾಗಿ ಯೋಜನೆ
ಆಯಾ ರಾಜ್ಯಗಳಿಗೆ ಅನುಗುಣವಾಗಿ ಕಾಮಗಾರಿಗಳ ಅನುಷ್ಠಾನಕ್ಕೆ ಹೊಸ ಯೋಜನೆಯಿಂದ ಸಾಧ್ಯವಾಗಲಿದೆ. ಇದರಿಂದ ಗ್ರಾಮ ಮಟ್ಟದಲ್ಲಿ ಹತ್ತುಹಲವು ಕಾರ್ಯಯೋಜನೆಗಳನ್ನು ರೂಪಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರ ಶೇ ೬೦, ರಾಜ್ಯ ಸರಕಾರ ಶೇ ೪೦ ಅನುಪಾತದಲ್ಲಿ ಹಣವನ್ನು ಈ ಯೋಜನೆಗೆ ಒದಗಿಸಬೇಕಾಗಿದೆ. ಕಾಮಗಾರಿಗಳು ರಾಜ್ಯ ಹಾಗೂ ದೇಶದ ಸ್ವತ್ತಾಗಿ ಪರಿವರ್ತಿಸುವ ಸದುದ್ದೇಶವನ್ನು ಹೊಂದಲಾಗಿದೆ. ರಾಜ್ಯ ಸರಕಾರಕ್ಕೆ ಯೋಜನೆಯ ಹಕ್ಕನ್ನು ನೀಡಲಾಗಿದೆ. ಆದ್ಯತೆ ಮೇರೆಗೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕಾಮಗಾರಿಗಳ ಸ್ವರೂಪಗಳಲ್ಲಿ ಬದಲಾವಣೆ ಇರುತ್ತದೆ. ಈ ಯೋಜನೆ ಸಹಾಯದಿಂದ ಕಾಮಗಾರಿಯ ಸ್ವರೂಪಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಇದು ಲಾಭದಾಯಕವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಮೊದಲು ಜಾಬ್ಕಾರ್ಡ್ ಮೂಲಕ ‘ಮನರೇಗ’ ಹೆಸರಿನಲ್ಲಿ ಹಣ ದುರುಪಯೋಗವಾಗುತ್ತಿತ್ತು. ಇದೀಗ ಕಡಿವಾಣ ಬೀಳಲಿದೆ. ೩ ವರ್ಷಕ್ಕೊಮ್ಮೆ ಕಾರ್ಡ್ ನವೀಕರಣ ಮಾಡಿಕೊಳ್ಳಬೇಕಾಗಿದೆ ಎಂದರು.
ಹೆಸರು ಬದಲಾವಣೆ
ಮಹಾತ್ಮ ಗಾಂಧಿ ಹೆಸರಿನಲ್ಲಿದ್ದ ಯೋಜನೆಯನ್ನು ಹೆಸರನ್ನು ಬದಲಿಸಿದ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಗಾಂಧಿ ಅವರಿಗೆ ದೊರೆಯಬೇಕಾದ ಗೌರವವನ್ನು ನೀಡಲಾಗಿದೆ. ಸ್ವಚ್ಛ ಭಾರತ್ ಕೂಡ ಗಾಂಧಿಗೆ ಸಮರ್ಪಿಸಲಾಗಿದೆ. ನಾವು ಗಾಂಧಿ ಹೆಸರು ತೆಗೆದು ಮತ್ತೊಬ್ಬರ ಹೆಸರನ್ನು ಇಟ್ಟಿಲ್ಲ. ಸಮಗ್ರ ದೃಷ್ಟಿಕೋನದಲ್ಲಿ ಮನದಲ್ಲಿಟ್ಟುಕೊಂಡು ಹೆಸರು ಬದಲಾವಣೆ ಮಾಡಲಾಗಿದೆ ಎಂದರು. ಹೆಸರು ಬದಲಿಸಿದ ಹಿನ್ನೆಲೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ಸಹಕಾರ ದೊರೆಯದಿದ್ದರೆ ನಾವು ಅಧಿಕಾರಕ್ಕೆ ಬಂದು ಅನುಷ್ಠಾನ ಮಾಡುತ್ತೇವೆ. ಜನಪರ ಕಾಳಜಿ ಇದ್ದರೆ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಹೆಸರು ಬದಲಾವಣೆಯಲ್ಲಿ ಕಾಂಗ್ರೆಸ್ಗೆ ತಕರಾರಿಲ್ಲ. ಯೋಜನೆಗೆ ಶೇ ೪೦ ಪಾಲುಹಣ ನೀಡಬೇಕೆನ್ನುವ ಉದ್ದೇಶದಿಂದ ವಿರೋಧವಷ್ಟೆ ಎಂದು ವ್ಯಂಗ್ಯವಾಡಿದ ಅವರು, ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಬಾರದು. ಕರ್ನಾಟಕ ರಾಜ್ಯದ ಕಾಂಗ್ರೆಸ್ ನಾಯಕರು ಮಾತ್ರ ಈ ಬಗ್ಗೆ ಊಹಾಪೋಹ ಸೃಷ್ಟಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಮರೀಚಿಕೆಯಾಗಿದೆ. ರಸ್ತೆಗೆ ತೇಪೆ ಹಾಕಲು ಹಣ ಇಲ್ಲದಾಗಿದೆ. ಕಾಂಗ್ರೆಸ್ನಿAದ ವಿಷಯಾಂತರ ಮಾಡುವ ಕೆಲಸವಾಗುತ್ತಿದೆ. ಆಡಳಿತ ಅಸಮರ್ಥತೆಯಿಂದ ವಿರೋಧ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಜಿಲ್ಲಾ ವಕ್ತಾರ ತಳೂರು ಕಿಶೋರ್ ಕುಮಾರ್ ಹಾಜರಿದ್ದರು.