ಮಡಿಕೇರಿ, ಜ. ೯: ಹೊಸೂರು ಗ್ರಾ.ಪಂ. ವ್ಯಾಪ್ತಿಯ ಹೊಸಕೋಟೆಯ ಸರಕಾರಿ ಜಾಗದಲ್ಲಿ ನೆಲೆಸಿರುವ ೭೮ ಕುಟುಂಬಗಳಿಗೆ ನಿವೇಶನ ಒದಗಿಸಬೇಕೆಂದು ಒತ್ತಾಯಿಸಿ ತಾ. ೧೨ ರಂದು ಹೊಸೂರು ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಕಾರ್ಯದರ್ಶಿ ಸಿ. ಶೈಲೇಂದ್ರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಾಜಪೇಟೆ ತಾಲೂಕಿನ ಹೊಸಕೋಟೆ ಗ್ರಾಮದ ೩.೩೦ ಎಕರೆ ಜಾಗ ಐಟಿಡಿಪಿ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಈ ಜಾಗದಲ್ಲಿ ಈಗಾಗಲೇ ೭೬ ಕುಟುಂಬಗಳು ಜೋಪಡಿ ನಿರ್ಮಿಸಿಕೊಂಡು ವಾಸಿಸುತ್ತಿವೆ. ಈ ಭೂಮಿಯನ್ನು ಸಮತಟ್ಟು ಮಾಡಿ ಪ್ರತಿ ಕುಟುಂಬಕ್ಕೆ ೨ ಸಾವಿರ ಚದರ ಅಡಿಯಂತೆ ಜಾಗ ನೀಡ ಬೇಕೆಂದು ಈ ಮೊದಲು ಒತ್ತಾಯಿಸಲಾಗಿತ್ತು. ಆದರೆ, ಇದೀಗ ವಾಸಿಸುತ್ತಿರುವವರೊಂದಿಗೆ ಮತ್ತಷ್ಟು ಕುಟುಂಬಗಳನ್ನು ಸೇರಿಸಿ ಒಟ್ಟು ೧೧೦ ಕುಟುಂಬಗಳಿಗೆ ತಲಾ ೬೦೦ ಚದರ ಅಡಿಗಳಂತೆ ನಿವೇಶನ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ. ಸಣ್ಣ ವಿಸ್ತೀರ್ಣದ ಜಾಗದಲ್ಲಿ ಮನೆ ನಿರ್ಮಾಣ ಅಸಾಧ್ಯ ಎಂಬ ಪರಿಸ್ಥಿತಿ ಇದೆ. ಹಾಗಾಗಿ ೭೬ ಕುಟುಂಬಗಳಿಗೆ ಮಾತ್ರ ಕನಿಷ್ಠ ೨ ಸಾವಿರ ಚದರ ಅಡಿ ಜಾಗವನ್ನು ನೀಡಬೇಕೆಂದು ಒತ್ತಾಯಿಸಿ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಬುಡಕಟ್ಟು ಕಾರ್ಮಿಕರ ಸಂಘದ ಅಧ್ಯಕ್ಷ ವೈ.ಬಿ. ಗಪ್ಪು, ಕಾರ್ಯದರ್ಶಿ ಜೆ.ಸಿ. ಲಲಿತಾ, ಖಜಾಂಚಿ ಪಿ.ಟಿ. ಜ್ಯೋತಿ, ಸದಸ್ಯ ವಿನಯ್ ಕುಮಾರ್, ಆದಿವಾಸಿ ಮುಖಂಡ ಜೆ.ಟಿ. ಅಯ್ಯಪ್ಪ ಹಾಜರಿದ್ದರು.