ಕೆ.ಎA ಇಸ್ಮಾಯಿಲ್ ಕಂಡಕರೆ

ಮಡಿಕೇರಿ, ಜ. ೧೦: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಯಾ ಗುತ್ತಿರುವ ಹೊತ್ತಿನಲ್ಲಿಯೇ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಅವಧಿ ಮುಕ್ತಾಯದ ಹಂತಕ್ಕೆ ತಲುಪಿದ್ದು, ಹಳ್ಳಿ ಪಾಲಿಟಿಕ್ಸ್ ರಂಗೇರಲು ಕಾಯುತ್ತಿದೆ. ಈ ನಡುವೆ ಗ್ರಾ.ಪಂ. ಚುನಾವಣೆ ಸದಸ್ಯರ ಅಧಿಕಾರ ಅವಧಿ ಮುಗಿದ ತಕ್ಷಣ ಘೋಷಣೆಯಾಗುತ್ತದೊ? ಅಥವಾ ಆಡಳಿತಾಧಿಕಾರಿಯ ನೇಮಕ ನಡೆಯುತ್ತದೆಯೊ? ಎಂಬ ಪ್ರಶ್ನೆಯೂ ಜನರಲ್ಲಿ ಮೂಡಿದೆ.

ಹೌದು.. ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಎಂಬ ಮಾತಿದೆ. ಇದದಲ್ಲಿ ಗ್ರಾ.ಪಂ.ಗಳು ಬಹು ದೊಡ್ಡ ಪಾತ್ರವನ್ನು ವಹಿಸುತ್ತದೆ. ಯಾವುದೇ ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಯದಿದ್ದರೂ ವಿವಿಧ ಪಕ್ಷಗಳ ಬೆಂಬಲಿತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತಾರೆ. ಅದೇ ರೀತಿ ಆಯಾ ಗ್ರಾಮಗಳ ವಾರ್ಡ್ಗಳಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಒಂದಷ್ಟು ಮಂದಿಯು ರಾಜಕಾರಣದ ಮೂಲಕ ಬದಲಾವಣೆ ತರುವ ಉದ್ದೇಶದಿಂದ ಸ್ಪರ್ಧೆ ಮಾಡುತ್ತಾರೆ. ಇದೆಲ್ಲದರ ಹೊರತಾಗಿ ಗ್ರಾಮ ಪಂಚಾಯಿತಿ ಅಖಾಡ ಅತ್ಯಂತ ಪ್ರತಿಷ್ಠಿತ ಚುನಾವಣೆ ಎಂದೇ ಕರೆಸಿಕೊಳ್ಳುತ್ತದೆ. ಸ್ಥಳೀಯವಾಗಿ ನಾಯಕತ್ವ ಹೊಂದಲು ಇದು ಮಹತ್ವದ ಹೆಜ್ಜೆಯಾಗಿರುತ್ತದೆ. ಇದೀಗ ೫ ವರ್ಷದ ಅವಧಿ ಮುಕ್ತಾಯವಾಗಿ ಮತ್ತೊಂದು ಚುನಾವಣೆಗೆ ರಾಜ್ಯ ಸಜ್ಜಾಗಿದೆ. ಅದೇ ರೀತಿ ಕೊಡಗು ಜಿಲ್ಲೆಯಲ್ಲಿಯೂ ಚುನಾವಣೆ ರಂಗು ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ, ಸರಕಾರ ವಾರ್ಡ್ವಾರು ಮೀಸಲಾತಿ ಪ್ರಕಟಿಸಿದ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ನಂತರವಷ್ಟೆ ಇವೆಲ್ಲ ವಿದ್ಯಮಾನಗಳು ಗರಿಗೆದರಲು ಸಾಧ್ಯವಾಗುತ್ತದೆ.

ಅಧಿಕಾರ ಮುಕ್ತಾಯದ ಹಂತಕ್ಕೆ

ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಇದೇ ಜನವರಿ ತಿಂಗಳ ಕೊನೆಯ ಮತ್ತು ಫೆಬ್ರವರಿ ಮೊದಲ ವಾರದಲ್ಲಿ ಕೊಡಗು ಜಿಲ್ಲೆಯ ೧೦೨ ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಗೋಣಿಕೊಪ್ಪ ಗ್ರಾ.ಪಂ. ಮಾತ್ರ ಜೂನ್ ಕೊನೆಯಲ್ಲಿ ಅವಧಿ ಮುಕ್ತಾಯವಾಗಲಿದೆ. ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧಿಕಾರ ಅವಧಿ ೨೦೨೭ರಲ್ಲಿ ಪೂರ್ಣಗೊಳ್ಳಲಿದೆ. ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದು, ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಇದೀಗ ಕುಶಾಲನಗರ ಪುರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ಜಿಲ್ಲೆಯಲ್ಲಿ ೧೦೧ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಬೇಕಿದೆ.

ಜಿಲ್ಲೆಯಲ್ಲಿ ೨೦೨೦ರಲ್ಲಿ ಎರಡು ಹಂತಗಳಲ್ಲಿ ಗ್ರಾ.ಪಂ ಚುನಾವಣೆ ನಡೆದಿತ್ತು. ೨೦೨೦ರ ಡಿಸೆಂಬರ್ ೨೨ರಂದು ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಚುನಾವಣಾ ನಡೆದಿತ್ತು. ೨೦೨೦ರ ಡಿಸೆಂಬರ್ ೨೭ರಂದು ವಿರಾಜಪೇಟೆ ತಾಲೂಕಿನ ಗ್ರಾ.ಪಂ ಗಳಿಗೆ ಎಲೆಕ್ಷನ್ ನಡೆದು, ೨೦೨೦ರ ಡಿಸೆಂಬರ್ ೩೦ರಂದು ಚುನಾವಣಾ ಫಲಿತಾಂಶ ಹೊರಬಿದ್ದಿತ್ತು.

ಚುನಾವಣೆಯೋ-ಆಡಳಿತಾಧಿಕಾರಿಯೋ?

೨೦೧೫ರಲ್ಲಿ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸದಸ್ಯರ ಅಧಿಕಾರಾವಧಿ ೨೦೨೦ರ ಜೂನ್ ತಿಂಗಳಿಗೆ ಮುಕ್ತಾಯಗೊಂಡಿತ್ತು. ಆದರೆ ೨೦೨೦ರ ಜೂನ್-ಜುಲೈ ತಿಂಗಳಲ್ಲಿ ಕೋವಿಡ್ ಕಾರಣದಿಂದಾಗಿ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡಿತ್ತು. ಅಂದಿನ ಬಿಜೆಪಿ ಸರ್ಕಾರ ಗ್ರಾ.ಪಂಗಳಿಗೆ ಜಿಲ್ಲಾಧಿಕಾರಿ ಮೂಲಕ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿತ್ತು. ಆರು ತಿಂಗಳ ಕಾಲ ೨೦೨೦ರಲ್ಲಿ ಗ್ರಾ.ಪಂಗಳಲ್ಲಿ ಆಡಳಿತಾಧಿಕಾರಿಗಳು ಅಧಿಕಾರ ನಡೆಸಿದ್ದರು.

ಬಳಿಕ ೨೦೨೦ರ ನವೆಂಬರ್ ೩೦ರಂದು ರಾಜ್ಯ ಚುನಾವಣಾ ಆಯೋಗ ಚುನಾವಣಾ ಅಧಿಸೂಚನೆ ಪ್ರಕಟಿಸಿತ್ತು. ಇದೀಗ ಗ್ರಾ.ಪಂ ಸದಸ್ಯರ ಅವಧಿ ಮುಕ್ತಾಯದತ್ತ ಬಂದಿದೆ. ಗ್ರಾ.ಪಂ ವಾರ್ಡ್ವಾರು ಮೀಸಲಾತಿ ನಿಗದಿಪಡಿಸುವ ಅಧಿಕಾರ ಕೂಡ ರಾಜ್ಯ ಸರ್ಕಾರದ ಕೈಯಲ್ಲಿದೆ. ಸರ್ಕಾರ ಮೀಸಲಾತಿ ಪ್ರಕಟಿಸಿದರೆ ಮಾತ್ರ ರಾಜ್ಯ ಚುನಾವಣಾ ಆಯೋಗ ಚುನಾವಣಾ ಸಿದ್ಧತೆ ಮತ್ತು ದಿನಾಂಕವನ್ನು ಘೋಷಿಸಲು ಸಾಧ್ಯವಾಗುತ್ತದೆ. ೨೦೨೦ರಲ್ಲಿ ಗ್ರಾ.ಪಂ ಚುನಾವಣೆಯ ವಾರ್ಡ್ವಾರು ಮೀಸಲು ಪಟ್ಟಿಯನ್ನು ಆ.೨೭ ರಂದು ಪ್ರಕಟಿಸಲಾಗಿತ್ತು. ಆಯೋಗ ನಿಯಮದಂತೆ ಮೀಸಲು ಹೊರಡಿಸಿದ ೪೫ ದಿನಗಳ ಬಳಿಕ ಚುನಾವಣಾ ದಿನಾಂಕ ಹೊರಡಿಸಬೇಕಾಗುತ್ತದೆ. ೨೦೨೦ರಲ್ಲಿ ಕೋವಿಡ್ ಕಾರಣದಿಂದಾಗಿ ಚುನಾವಣೆ ಮುಂದೂಡಲಾಗಿತ್ತು. ಈ ಸಂಬAಧ ೨೦೨೦ರಲ್ಲಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

ಆದರೆ ಇದೀಗ ಮೀಸಲು ನಿಗದಿಪಡಿಸುವ ಅಧಿಕಾರ ಸರ್ಕಾರದ ಕೈಯಲ್ಲಿದೆ. ಸರ್ಕಾರ ಮೀಸಲು ಪಟ್ಟಿ ಘೋಷಿಸಿದರೆ, ಮಾತ್ರ ರಾಜ್ಯ ಚುನಾವಣಾ ಆಯೋಗಕ್ಕೆ ಚುನಾವಣಾ ಸಿದ್ಧತೆ ನಡೆಸಲು ಸಾಧ್ಯ. ಸರ್ಕಾರ ಮೀಸಲು ಪಟ್ಟಿಯನ್ನು ಹೊರಡಿಸದೇ ಇದ್ದಲ್ಲಿ ಗ್ರಾ.ಪಂ ಚುನಾವಣೆ ತಡವಾಗುವ ಸಾಧ್ಯತೆ ಇದ್ದು, ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಸಾಧ್ಯತೆ ಅಧಿಕವಾಗಿದೆ.

ಗರಿಗೆದರಿದ ಚಟುವಟಿಕೆ

ಗ್ರಾಮೀಣ ಭಾಗದಲ್ಲಿ ಪಂಚಾಯಿತಿ ಫೈಟ್ ಜೋರಾಗಿಯೇ ಇರಲಿದೆ. ಇದೀಗ ಅವಧಿ ಪೂರ್ಣಗೊಳ್ಳುವ ಮುನ್ನವೇ ಹಳ್ಳಿಗಳಲ್ಲಿ ಗ್ರಾ.ಪಂ ಚುನಾವಣಾ ಚರ್ಚೆ ಕಾವೇರುತ್ತಿದೆ. ವಾರ್ಡ್ವಾರು ಮೀಸಲಾತಿ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ ೨೬, ಸೋಮವಾರಪೇಟೆ ೨೩, ವೀರಾಜಪೇಟೆ ೧೭, ಕುಶಾಲನಗರ ೧೬ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ೧೯ ಸೇರಿ ೧೦೧ ಗ್ರಾ.ಪಂಗಳಿಗೆ ೨೦೨೬ರಲ್ಲಿ ಚುನಾವಣೆ ನಡೆಯಬೇಕಿದೆ.