ಮಡಿಕೇರಿ, ಜ. ೧೦: ನಗರದ ಅಶೋಕಪುರದ ಡಾ. ಬಿ.ಆರ್. ಅಂಬೇಡ್ಕರ್ ಭವನ ಸಮಿತಿ ವತಿಯಿಂದ ಸಾವಿತ್ರಿ ಬಾಯಿ ಫುಲೆ ಅವರ ೧೯೫ನೇ ಜಯಂತೋತ್ಸವ ಆಚರಿಸಲಾಯಿತು. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾ ಅಧ್ಯಕ್ಷೆ ಕಲಾವತಿ, ಸಾವಿತ್ರಿ ಬಾಯಿ ಫುಲೆ ಅವರ ವಿಚಾರಗಳು ಪ್ರಪಂಚಕ್ಕೆ ಮತ್ತಷ್ಟು ಪರಿಚಯಗೊಳಿಸಬೇಕು. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಹಮ್ಮಿಕೊಂಡು ಸಮಾಜಕ್ಕೆ ಅವರ ಆದರ್ಶವನ್ನು ಪಸರಿಸುವ ಕೆಲಸವಾಗಬೇಕೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭವನ ಸಮಿತಿ ಅಧ್ಯಕ್ಷ ಎಚ್‌ಎಂ, ನಂದಕುಮಾರ್, ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಸೌಹಾರ್ದತೆ, ಸಹೋದರತೆ, ಸಮಾನತೆ ಮತ್ತು ಶಾಂತಿಯ ಸಂದೇಶ ಸಾರುವ ಎಲ್ಲಾ ವಿಶಿಷ್ಟ ಹಾಗೂ ವಿಶೇಷ ದಿನಗಳನ್ನು ಆಚರಿಸುವುದಾಗಿ ಹೇಳಿದರು. ಕುಮಾರಿ ಲಾಂಚಿತ ನಂದಕುಮಾರ್ ಅವರು ಸಾವಿತ್ರಿ ಬಾಯಿ ಫುಲೆ ಅವರ ಜೀವನ, ಸಮಸಮಾಜದ ನಿರ್ಮಾಣದಲ್ಲಿನ ಅವರ ಪಾತ್ರ ಮತ್ತು ದೇಶದ ಮೊದಲ ಶಿಕ್ಷಕಿಯಾಗಿ ಅವರ ನಿಸ್ವಾರ್ಥ ಸೇವೆ ಹಾಗೂ ತ್ಯಾಗವನ್ನು ಸಭೆಗೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯೆ ಶಾರದಾ ನಾಗರಾಜ್, ಸವಿತಾ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ವಾಸಂತಿ, ಹಿಂದು ಮಲಯಾಳಿ ಸಂಘ ಮಹಿಳಾ ಘಟಕ ಅಧ್ಯಕ್ಷೆ ಲತಾ ರಾಜನ್, ಜಮಾಹತೆ ಇಸ್ಲಾಮ್ ಮಹಿಳಾ ಘಟಕ ಅಧ್ಯಕ್ಷೆ ಮುಹೀನಾ ಅಬೂಬಕರ್, ಕುಲಾಲ ಸಂಘ ಮಹಿಳಾ ಘಟಕದ ಅಧ್ಯಕ್ಷೆ ಕಾಂತಮಣಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಸಿದ್ದರಾಜು ಬೆಳ್ಳಯ್ಯ ಸ್ವಾಗತಿಸಿ, ಡಾ ಸತೀಶ್ ನಿರೂಪಿಸಿ, ಮುತ್ತಪ್ಪ ವಂದಿಸಿದರು.