ಕಣಿವೆ, ಜ. ೧೧: ಕುಶಾಲನಗರ ಪಟ್ಟಣದಲ್ಲಿ ನಿಧಾನ ಗತಿಯಲ್ಲಿರುವ ಒಳಚರಂಡಿ ಕಾಮಗಾರಿ ತ್ವರಿತವಾಗಿ ಪೂರೈಸುವಂತೆ ಶಾಸಕ ಡಾ.ಮಂತರಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಬಿಎಂ ರಸ್ತೆಯಲ್ಲಿ ಜೆಸಿಬಿ ಮೂಲಕ ಜಲಮಂಡಳಿ ಅಧಿಕಾರಿಗಳು ಖುದ್ದು ನಿಂತು ಎಸ್ ಟಿಪಿ ಕಾಮಗಾರಿ ಮಾಡಿಸುತ್ತಿದ್ದ ಸಂದರ್ಭ ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಶಾಸಕರು ಸ್ಥಳಕ್ಕೆ ಆಗಮಿಸಿ ರಾಷ್ಟ್ರೀಯ ಹೆದ್ದಾರಿಗೆ ಯಾವುದೇ ರೀತಿ ಹಾನಿಯಾಗದಂತೆ ಹಾಗೂ ಈಗಾಗಲೇ ಗುಂಡಿ ತೆರೆದ ಸ್ಥಳಗಳನ್ನು ಪೂರ್ಣವಾಗಿ ಮುಚ್ಚುವ ಮೂಲಕ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅನಾನುಕೂಲವಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು. ಹಾಗೆಯೇ ಕುಶಾಲ ನಗರ ಪಟ್ಟಣದ ಸಮಗ್ರ ಒಳಚರಂಡಿ ಪೈಪುಗಳನ್ನು ಜೋಡಣೆ ಮಾಡುವ ಮೂಲಕ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಸ್ಪಷ್ಟ ನಿರ್ದೇಶನ ನೀಡಿದರು.

ಈಗಾಗಲೇ ಒಳಚರಂಡಿಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಒಂದೆರಡು ಕಡೆಗಳಲ್ಲಿ ಬಾಕಿ ಇರುವ ಪೈಪುಗಳ ಜೋಡಣೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇನ್ನೂ ಕೆಲವೇ ದಿನಗಳಲ್ಲಿ ಗ್ರಾಹಕರ ಬಳಕೆಗೆ ಮುಕ್ತಗೊಳಿಸುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೂಡ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಕುಮಾರ್, ಒಳಚರಂಡಿ ಹಾಗೂ ಜಲ ಮಂಡಳಿ ಕಾರ್ಯಪಾಲಕ ಅಭಿಯಂತರ ಉಮೇಶ್ ಚಂದ್ರ, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್, ಸಹಾಯಕ ಅಭಿಯಂತರ ಬಿಪಿನ್ ಚಂದ್ರ ಇದ್ದರು.