ವೀರಾಜಪೇಟೆ, ಜ. ೧೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜಪೇಟೆ ತಾಲೂಕು, ಮೂರ್ನಾಡು ವಲಯದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿಯಲ್ಲಿ ಕೃಷಿ ನೀರಾವರಿ ಮಾಹಿತಿ ಕಾರ್ಯಕ್ರಮ ಬಲಮುರಿ ಗ್ರಾಮದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಪ್ರಶಾಂತ್ ಮುತ್ತಣ್ಣ ಅವರು, ಕೃಷಿ ನೀರಾವರಿ ಹಾಗೂ ಕೃಷಿಯಲ್ಲಿ ಮಣ್ಣಿನ ಪಾತ್ರದ ಬಗ್ಗೆ ಮಾತನಾಡಿ, ಭಾರತದ ಕೃಷಿ ಮಳೆಯೊಡನೆ ಆಡುವ ಜೂಜಾಟ ಎಂಬುದನ್ನು ಉಲ್ಲೆಖಿಸಿ ಕೃಷಿಯಲ್ಲಿ ಮಳೆಯ ಪ್ರಾಮುಖ್ಯತೆಯನ್ನು ವಿವರಿಸಿದರು.
ಮಳೆ ನೀರಿನ ಸಮರ್ಪಕ ಬಳಕೆ, ಮಳೆ ನೀರಿನ ಸಂಗ್ರಹಣೆಯಲ್ಲಿ ಕೃಷಿ ಹೊಂಡಗಳ ಪಾತ್ರ, ತೋಟ ಹಾಗೂ ಗದ್ದೆಯ ಬದಿಗಳಲ್ಲಿ ಚರಂಡಿ ನಿರ್ಮಾಣದ ಪ್ರಾಮುಖ್ಯತೆ, ನೀರು ಇಂಗಿಸುವುದರ ಪ್ರಯೋಜನಗಳನ್ನು ವಿವರಿಸಿ, ಕೊಳವೆ ಬಾವಿಗಳಿಗೆ ಜಲ ಪೂರಣ ಮಾಡುವುದರ ಮೂಲಕ ಅಂತರ್ಜಲವನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಕಿವಿಮಾತು ನೀಡಿದರು. ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ರಾಸಾಯನಿಕ ಮುಕ್ತ ಕೃಷಿ ಮಾಡಬೇಕು, ಬದಿಗಳಲ್ಲಿ ನುಗ್ಗೆ, ಅಗಸೆಯಂತಹ ಗಿಡ ಮರಗಳನ್ನು ನೆಟ್ಟು ಮಣ್ಣಿನ ಸವಕಳಿಯನ್ನು ತಪ್ಪಿಸುವುದರ ಜೊತೆಗೆ ಇದರಿಂದ ದಿನನಿತ್ಯದ ಬಳಕೆಗೆ ಸೊಪ್ಪಿನ ಬಳಕೆ ಮಾಡುವುದನ್ನು ತಿಳಿಸಿದರು.
ಸರಕಾರವು ವಿವಿಧ ಇಲಾಖೆಗಳ ಮೂಲಕ ಜಲ ಸಂರಕ್ಷಣೆಗೆ, ಮಣ್ಣಿನ ರಕ್ಷಣೆಗೆ ಸಂಬAಧಿಸಿದ ಸಾಕಷ್ಟು ಅನುದಾನಗಳನ್ನು ಕೊಡುತ್ತಿದೆ. ಇದರ ಬಗ್ಗೆ ಮಾಹಿತಿ ಪಡೆದುಕೊಂಡು ಮಣ್ಣು ಹಾಗೂ ನೀರಿನ ಸಂರಕ್ಷಣೆಗೆ ಕೈ ಜೋಡಿಸಬೇಕು ಎಂದು ವಿವರಿಸಿದರು.
ಕೃಷಿ ಮೇಲ್ವಿಚಾರಕ ವಸಂತ್, ಒಕ್ಕೂಟದ ಪದಾಧಿಕಾರಿ ಬಿಂದು, ಸೇವಾ ಪ್ರತಿನಿಧಿ ಸಾವಿತ್ರಿ, ಕೃಷಿ ಸಖಿ ದಿವ್ಯ, ಸಂಘದ ಸದಸ್ಯರು ಪ್ರಗತಿಪರ ಕೃಷಿಕರು ಇದ್ದರು.