ಸಿದ್ದಾಪುರ, ಜ. ೧೧: ಸಿದ್ದಾಪುರದ ಶ್ರೀ ದುರ್ಗಾ ಭಗವತಿ ದೇವಾಲಯದ ವಾರ್ಷಿಕ ತಿರು ಮಹೋತ್ಸವ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.

ತಿರುಮಹೋತ್ಸವದ ಅಂಗವಾಗಿ ಶ್ರೀ ದುರ್ಗಾ ಭಗವತಿ ದೇವಾಲಯದಲ್ಲಿ ಕೇರಳ ರಾಜ್ಯದ ತಲೋರ ತಲಿಪರಂಬ್ ಜಿಲ್ಲೆಯ ರಾಜರಾಜೇಶ್ವರಿ ದೇವಾಲಯದ ಬ್ರಹ್ಮಶ್ರೀ ಈಡವಲತ್ ಪುಡಯೂರ್ ಮನ ಕುಬೇರನ್ ನಂಬೂದಿರಿ ಪಾಡ್ ತಂತ್ರಿಗಳ ನೇತೃತ್ವದಲ್ಲಿ ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ಬಲಿ, ದೀಪಾರಾಧನೆ, ಮಹಾಮೃತ್ಯುಂಜಯ ಹೋಮ, ಭಗವತಿ ಸೇವೆ, ಉಷಾ ಪೂಜೆ, ಗುಳಿಗ ಮತ್ತು ನಾಗದೇವರಿಗೆ ಪೂಜೆ, ಕಳಸ ಅಭಿಷೇಕ ದೇವರಿಗೆ ಪೊಂಗಾಲ ಸಮರ್ಪಣೆ, ಸೇರಿದಂತೆ ನಾಲ್ಕು ದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.

ವಾರ್ಷಿಕ ತಿರುಮನೋತ್ಸವದ ಕೊನೆಯ ದಿನ ರಾತ್ರಿ ಬಲಿಬಿಂಬದ ಮೆರವಣಿಗೆ ನಡೆಯಿತು. ಶೋಭಾಯಾತ್ರೆಯಲ್ಲಿ ಶ್ರೀ ಭಗವತಿ ದೇವರ ಮೂರ್ತಿಯನ್ನು ಅರ್ಚಕರು ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ವೀರಾಜಪೇಟೆ ರಸ್ತೆಯಲ್ಲಿರುವ ಶ್ರೀ ದುರ್ಗಾ ಭಗವತಿ ದೇವಾಲಯದಿಂದ ಹೊರಟ ಮೆರವಣಿಗೆಯಲ್ಲಿ ಶ್ರೀಕೃಷ್ಣದೇವರ ಮತ್ತು ಶ್ರೀ ಭಗವತಿ ದೇವಿಯ ಮೂರ್ತಿಗಳನ್ನು ಹೂವಿನಿಂದ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿದ ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಿ ಸಿದ್ದಾಪುರದ ಬಸ್ ನಿಲ್ದಾಣದವರೆಗೆ ಸಾಗಿತು. ಕೇರಳದ ಪ್ರಖ್ಯಾತ ಚಂಡೆ ವಾದ್ಯ ಮೇಳ ತಂಡದಿAದ ಶೋಭಾ ಯಾತ್ರೆಯು ಸಾಗಿತು. ಮೆರವಣಿಗೆಯಲ್ಲಿ ವಿವಿಧ ದೇವರುಗಳ ಟ್ಯಾಬ್‌ಗಳು ಮೆರವಣಿಗೆ ಮೆರಗು ತಂದಿತು. ಕೇರಳ ರಾಜ್ಯದ ಗೊಂಬೆಗಳ ಕುಣಿತ ಆಕರ್ಷಕವಾಗಿತ್ತು.

ರಾತ್ರಿಯಲ್ಲಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ನಡೆಯಿತು ಪೂಜಾ ಕಾರ್ಯಕ್ರಮಗಳಿಗೆ ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ದೇವಾಲಯದ ವತಿಯಿಂದ ಭಕ್ತಾದಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.