ಸೋಮವಾರಪೇಟೆ, ಜ. ೧೨: ಸಮೀಪದ ತೋಳೂರು ಶೆಟ್ಟಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಕಳೆದ ಎರಡು ತಿಂಗಳಿನಿAದ ನೆಲೆಸಿದ್ದ ಅನಾಥ ಮತ್ತು ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವರನ್ನು ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಬೆಂಗಳೂರಿನಲ್ಲಿರುವ ಪುನಶ್ಚೇತನ ಶಿಬಿರಕ್ಕೆ ದಾಖಲಿಸಿದರು. ಬಸ್ ನಿಲ್ದಾಣದಲ್ಲಿ ತಂಗಿದ್ದ ಇವರನ್ನು ಗಮನಿಸಿದ ಗ್ರಾಮದ ನಿವೃತ್ತ ಶಿಕ್ಷಕ ಶಿವಕುಮಾರ್ ಅವರು ಕರವೇ ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು. ಇದರೊಂದಿಗೆ ಸ್ಥಳೀಯರ ನೆರವಿನೊಂದಿಗೆ ಧನ ಸಹಾಯ ಮಾಡಿ, ವ್ಯಕ್ತಿಯನ್ನು ಪುನಶ್ಚೇತನ ಶಿಬಿರಕ್ಕೆ ಕಳುಹಿಸಿಕೊಟ್ಟರು. ಈ ಸಂದರ್ಭ ಕರವೇ ಜಿಲ್ಲಾ ಅಧ್ಯಕ್ಷ ಕೆ.ಎನ್. ದೀಪಕ್ ಹಾಗೂ ಕೆ.ಟಿ.ಡಿ.ಓ. ಅಧ್ಯಕ್ಷ ವಸಂತ್ ಹಾಗೂ ಪದಾಧಿಕಾರಿಗಳು, ಗ್ರಾ.ಪಂ. ಮಾಜಿ ಅಧ್ಯಕ್ಷ ನವೀನ್, ಆರೋಗ್ಯ ಸಹಾಯಕ ಕೆ.ಪಿ. ಮಹೇಶ್, ಕೆ.ಕೆ. ಸುಧಾಕರ, ಟಿ.ಪಿ. ವಿಠಲ, ವಿ.ವಿ. ಮೊಗಪ್ಪ, ಬಿ.ಇ. ರವಿ, ಕುಸುಮ ಮತ್ತು ಪ್ರಿಯ ಅವರುಗಳು ಇದ್ದರು.