ಸುಂಟಿಕೊಪ್ಪ, ಜ. ೧೨: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಕಳೆದ ೨ ವರ್ಷಗಳಿಂದ ಪ್ರತಿ ಪಂಚಾಯಿತಿಗೆ ಜಲಜೀವನ್ ಕುಡಿಯುವ ನೀರಿನ ಯೋಜನೆ ರಾಜ್ಯ ಸರಕಾರ ಕೈಗೊಂಡಿದ್ದರೂ ಯಾವುದೇ ಪಂಚಾಯಿತಿಯಲ್ಲಿ ಕಾರ್ಯರೂಪಕ್ಕೆ ಬರಲಿಲ್ಲ. ಆದರೆ ಸುಂಟಿಕೊಪ್ಪ ಹಾರ್‌ಬೈಲ್ ಪ್ರದೇಶದಿಂದ ಈ ಯೋಜನೆ ಪ್ರಾರಂಭವಾಗಿ ೨ ವರ್ಷ ಕಳೆಯಿತು. ಮಾದಾಪುರ ರಸ್ತೆ ಬದಿಯನ್ನು ಈ ಯೋಜನೆ ಅಗೆದು ಗುಂಡಿಮುಚ್ಚದೆ ದೈನಂದಿನ ಜೀವನಕ್ಕೆ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಈ ಯೋಜನೆಯು ಹಾರ್‌ಬೈಲ್‌ನಿಂದ ಸುಂಟಿಕೊಪ್ಪ ಭಾಗದವರೆಗೆ ಸಾಗುತ್ತಿರುವ ಸಂದರ್ಭದಲ್ಲಿ ಗುತ್ತಿಗೆದಾರರು ಹಾಗೂ ಸಂಬAಧಪಟ್ಟ ಇಂಜಿನಿಯರ್‌ಗಳ ನಿರ್ಲಕ್ಷö್ಯದಿಂದ ಸಾರ್ವಜನಿಕರು ಓಡಾಡುವ ಮುಖ್ಯ ರಸ್ತೆಗಳನ್ನು ಸಂಪೂರ್ಣ ಅಗೆದು ಬಿಟ್ಟು ಚರಂಡಿ ನಿರ್ಮಿಸಿ ಪೈಪ್‌ಲೈನ್ ಹಾಕಿದ ನಂತರ ಮಣ್ಣುಮುಚ್ಚದೆ ರಸ್ತೆಯ ಬದಿಯಲ್ಲಿ ಅನೇಕ ಕಡೆಗಳಲ್ಲಿ ಅಪಾಯಕಾರಿ ಗುಂಡಿಗಳನ್ನು ಹಾಗೆಯೇ ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕಾಮಗಾರಿಯ ದುರವಸ್ಥೆಯಿಂದ ಪಾದಚಾರಿಗಳು, ವಾಹನ ಸವಾರರು, ಶಾಲಾ ವಿದ್ಯಾರ್ಥಿಗಳು, ವೃದ್ಧರು ಹಾಗೂ ರೋಗಿಗಳು ಪ್ರತಿದಿನ ಜೀವದ ಹಂಗಿನಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಕಾಮಗಾರಿ ಮುಂದುವರೆಸಿರುವುದು ಆಡಳಿತಾತ್ಮಕ ನಿರ್ಲಕ್ಷö್ಯಕ್ಕೆ ಸ್ಪಷ್ಟ ಉದಾಹರಣೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕಾಮಗಾರಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಾಣುತ್ತೆ.

ಈ ಕುರಿತು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಪ್ರಸಾದ್ ಕುಟ್ಟಪ್ಪ ಹಾಗೂ ಆಲಿಕುಟ್ಟಿ ಅವರು ಪ್ರತಿಕ್ರಿಯಿಸಿ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕಾದ ಜಲಜೀವನ್ ಮಿಷನ್ ಯೋಜನೆಯ ಹೆಸರಿನಲ್ಲಿ ಸಾರ್ವಜನಿಕ ರಸ್ತೆಗಳನ್ನೇ ಹಾಳು ಮಾಡಿರುವುದು ಅಕ್ಷಮ್ಯ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನ ಸಿಕ್ಕಿಲ್ಲ. ತಕ್ಷಣ ಕಾಮಗಾರಿಯನ್ನು ಸರಿಪಡಿಸಿ ಚರಂಡಿ ಮತ್ತು ರಸ್ತೆಯ ವ್ಯವಸ್ಥೆ ಪುನಃ ಸ್ಥಾಪಿಸದಿದ್ದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗಂಭೀರ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವ ಉದ್ದೇಶದ ಯೋಜನೆ ಇಂದು ಸಾರ್ವಜನಿಕರಿಗೆ ತೊಂದರೆಯಾಗಿರುವುದು ಅತ್ಯಂತ ಖೇದಕರ ವಿಷಯವಾಗಿದೆ. ಅಪೂರ್ಣ ಕಾಮಗಾರಿಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಅದರ ಸಂಪೂರ್ಣ ಹೊಣೆಗಾರಿಕೆ ಸಂಬAಧಪಟ್ಟ ಗುತ್ತಿಗೆದಾರರು ಹಾಗೂ ಮೇಲಾಧಿಕಾರಿಗಳ ಮೇಲೆಯೇ ಬರುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಆದುದರಿಂದ ಜಿಲ್ಲಾಡಳಿತ ತಕ್ಷಣ ಮಧ್ಯ ಪ್ರವೇಶಿಸಿ ಸ್ಥಳ ಪರಿಶೀಲನೆ ನಡೆಸಿ ಈ ಕಾಮಗಾರಿಯ ಗುಣಮಟ್ಟವನ್ನು ಮತ್ತು ಪ್ರಗತಿ ಪರಿಶೀಲಿಸಿ ರಸ್ತೆ ಹಾಗೂ ಚರಂಡಿಯನ್ನು ತಕ್ಷಣ ದುರಸ್ತಿ ಮಾಡಿ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸಿ ನೆನೆಗುದಿಗೆ ಬಿದ್ದಿರುವ ಈ ಕಾಮಗಾರಿಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

- ರಾಜುರೈ