ಗೋಣಿಕೊಪ್ಪಲು, ಜ.೧೨: ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಚೂರು ಕುಂದ ಗ್ರಾಮದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಡಾಂಬರ್, ಸಿಮೆಂಟ್ ಮಿಕ್ಸಿಂಗ್ ಘಟಕದಿಂದ ಸ್ಥಳೀಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಲ್ಲದೆ ಪರಿಸರ ಮಾಲಿನ್ಯವಾಗುತ್ತಿದೆ. ಎಂದು ಆರೋಪಿಸಿ ಗ್ರಾಮಸ್ಥರು ಡಾಂಬರು ಸಾಗಿಸುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.

ಹಾತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗುಮ್ಮಟ್ಟಿರ ದರ್ಶನ್ ನಂಜಪ್ಪ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟಿಸಿ ತಮ್ಮ ಆಕ್ರೋಶ ಹೊರ ಹಾಕಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗೋಣಿಕೊಪ್ಪ ಠಾಣೆ ಸಬ್‌ಇನ್ಸ್ಪೆಕ್ಟರ್ ಪ್ರದೀಪ್ ಅವರು ಗ್ರಾಮಸ್ಥರ ಮನವೊಲಿಸಿದ ಬಳಿಕ ಪ್ರತಿಭಟನೆ ಕೈ ಬಿಟ್ಟರು. ಡಾಂಬರು ಮಿಕ್ಸಿಂಗ್ ಘಟಕದಿಂದ ಗ್ರಾಮಸ್ಥರ ಆರೋಗ್ಯ ಹಾಳಾಗುತ್ತಿದೆ. ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಗ್ರಾಮ ಸಭೆಯಲ್ಲಿ ಈ ಹಿಂದೆ ಗ್ರಾಮಸ್ಥರ ವಿರೋಧದ ಹಿನ್ನೆಲೆಯಲ್ಲಿ ಘಟಕಗಳ ಪರವಾನಗಿ ನವೀಕರಣ ಮಾಡದಂತೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅದರನ್ವಯ ಘಟಕಗಳ ಪರವಾನಗಿ ನವೀಕರಣ ಮಾಡಲು ಹಾತೂರು ಗ್ರಾಮ ಪಂಚಾಯಿತಿ ಎನ್‌ಒಸಿ ನೀಡಿರಲಿಲ್ಲ. ಹೀಗಿದ್ದರೂ ಡಾಂಬರ್ ಸಿಮೆಂಟ್ ಮಿಕ್ಸಿಂಗ್ ಘಟಕಗಳನ್ನು ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಘಟಕ ಮುಚ್ಚದಿದ್ದಲ್ಲಿ ಗೋಣಿಕೊಪ್ಪ ಹಾಗೂ ವಿರಾಜಪೇಟೆ ತಹಶೀಲ್ದಾರರಿಗೆ ದೂರು ಸಲ್ಲಿಸಲಾಗುವುದು ತಾಲೂಕು ಆಡಳಿತ ಮಿಕ್ಸಿಂಗ್ ಘಟಕ ಮುಚ್ಚಲು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಪ್ರತಿಭಟನಕಾರರು ಎಚ್ಚರಿಸಿದರು. ಪ್ರತಿಭಟನಾ ವೇಳೆ ಹಾತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೊಕ್ಕಂಡ ನಮಿತಾ, ಗ್ರಾಮಸ್ಥರಾದ ತೀತಮಾಡ ಸುಜೇತ್, ತೀತಮಾಡ ಅಯ್ಯಪ್ಪ, ಪಟ್ರಂಗಡ ಸೀಮಂತ್ ಮುತ್ತಣ್ಣ, ನಿಕ್ಕಿ ಮಾದಪ್ಪ, ಪೂವಣ್ಣ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.

ಪ್ರತಿಭಟನೆಯ ನಂತರ ಗ್ರಾಮಸ್ಥರು ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣನವರನ್ನು ವೀರಾಜಪೇಟೆಯ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಇಲ್ಲಿಯ ವಿದ್ಯಮಾನಗಳನ್ನು ವಿವರಿಸಿದರು. ಗ್ರಾಮಸ್ಥರ ಬೇಡಿಕೆಯಂತೆ ಶಾಸಕ ಪೊನ್ನಣ್ಣ ಈಚೂರು ಕುಂದದಲ್ಲಿರುವ ಡಾಂಬರು ಮಿಕ್ಸಿಂಗ್ ಘಟಕದ ಬಳಿ ತೆರಳಿ ಗ್ರಾಮಸ್ಥರೊಂದಿಗೆ ಹಾಗೂ ಮಾಲೀಕರಾದ ನಾಮೇರ ನವೀನ್ ಹಾಗೂ ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ವೇಳೆ ವೀರಾಜಪೇಟೆ ಡಿವೈಎಸ್ಪಿ, ಇನ್ನಿತರ ಅಧಿಕಾರಿಗಳು ಹಾಜರಿದ್ದರು.

-ಹೆಚ್.ಕೆ.ಜಗದೀಶ್