ಮಡಿಕೇರಿ, ಜ. ೧೨: ಬಲ್ಲಮಾವಟಿಯ ನಾಲ್‌ನಾಡ್ ಹಾಕಿ ಕ್ಲಬ್ ವತಿಯಿಂದ ೪ ಗ್ರಾ.ಪಂ. ವ್ಯಾಪ್ತಿಯ ೧೪ ಗ್ರಾಮಗಳ ನಡುವೆ ಹಾಕಿ ಪಂದ್ಯಾವಳಿ ಮಾರ್ಚ್ ೨೯ ರಿಂದ ೫ ದಿನಗಳ ಕಾಲ ನಡೆಯಲಿದೆ ಎಂದು ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾಹಿತಿ ನೀಡಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ೨೦೦೦ನೇ ಇಸವಿಯಲ್ಲಿ ಕ್ಲಬ್ ಆರಂಭವಾಗಿದ್ದು, ೧೩ನೇ ವರ್ಷದ ಪಂದ್ಯಾವಳಿ ನಡೆಯಲಿದೆ. ನಾಪೋಕ್ಲು, ಬಲ್ಲಮಾವಟಿ, ಎಮ್ಮೆಮಾಡು ಹಾಗೂ ಕಕ್ಕಬ್ಬೆ ಗ್ರಾ.ಪಂ. ವ್ಯಾಪ್ತಿಯ ೧೪ ಗ್ರಾಮಗಳ ನಡುವೆ ಈ ಪಂದ್ಯಾವಳಿ ಆಯೋಜಿಸಲಾಗಿದೆ. ಇದರಿಂದ ಸ್ಥಳೀಯ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ದೊರೆಯುತ್ತದೆ ಎಂದರು. ಇದರೊಂದಿಗೆ ನಾಲ್‌ನಾಡ್ ವ್ಯಾಪ್ತಿಯ ಪ್ರೌಢಶಾಲೆಗಳ ನಡುವೆ ಹಾಕಿ ಪಂದ್ಯಾಟ ಆಯೋಜಿಸ ಲಾಗಿದೆ. ಜೊತೆಗೆ ಏಪ್ರಿಲ್ ತಿಂಗಳಿನಲ್ಲಿ ಹಾಕಿ ತರಬೇತಿ ಶಿಬಿರವನ್ನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗುವುದು.
ಕಳೆದ ವರ್ಷ ೭೦ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡು ತರಬೇತುದಾರರಿಂದ ತರಬೇತಿ ಪಡೆದಿದ್ದರು ಎಂದರು. ನಾಲ್‌ನಾಡ್ ವ್ಯಾಪ್ತಿಯ ಮಹಿಳೆಯರಿಗೆ ಹಗ್ಗ ಜಗ್ಗಾಟ ಪಂದ್ಯಾವಳಿಯನ್ನು ಏ. ೩ ರಂದು ನಡೆಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ನಾಲ್‌ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಟಿ. ಸುರೇಶ್, ಕಾರ್ಯದರ್ಶಿ ಮಚ್ಚುರ ಯದುಕುಮಾರ್, ನಿರ್ದೇಶಕರು ಗಳಾದ ಅಪ್ಪಚೆಟ್ಟೋಳಂಡ ಹರ್ಷಿತ್ ಅಯ್ಯಪ್ಪ, ಕೋಟೇರ ಬೋಪಣ್ಣ, ಪಾಲೆಯಡ ಸಂತೋಷ್ ಹಾಜರಿದ್ದರು.