ಮಡಿಕೇರಿ, ಜ. ೧೩: ಕೊಡಗು ಜಿಲ್ಲೆ ಭೌಗೋಳಿಕವಾಗಿ ರಾಜ್ಯದ ಅತ್ಯಂತ ಪುಟ್ಟ ಜಿಲ್ಲೆ ಎಂಬದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಜಿಲ್ಲೆಯಲ್ಲಿ ಈ ಹಿಂದಿನ ಮೂರು ತಾಲೂಕುಗಳಾಗಿದ್ದ ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆಯೊಂದಿಗೆ ಹೊಸದಾಗಿ ಪ್ರಾರಂಭಗೊAಡ ಪೊನ್ನಂಪೇಟೆ ಹಾಗೂ ಕುಶಾಲನಗರ ಸೇರಿ ಇದೀಗ ಐದು ತಾಲೂಕುಗಳಿವೆ.

ಪ್ರಸ್ತುತ ದೇಶವ್ಯಾಪಿ, ರಾಜ್ಯವ್ಯಾಪಿಯಾಗಿ ಬೀದಿ ನಾಯಿಗಳ ವಿಚಾರ ಭಾರೀ ಸುದ್ದಿಯಲ್ಲಿದೆ. ಕೆಲವಾರು ಕಾರಣಗಳಿಂದ ಇದೊಂದು ಪ್ರಸ್ತುತದ ಸಮಸ್ಯೆಯೂ ಆಗಿ ಪರಿಣಮಿಸಿರುವುದು ಎಲ್ಲರ ಅನುಭವದಲ್ಲಿದೆ.

ಕೊಡಗಿನಲ್ಲಿವೆ ೫೬೦೨ ಬೀದಿನಾಯಿಗಳು

ಕೊಡಗು ಜಿಲ್ಲೆಯಲ್ಲಿ ಸದ್ಯದ ಮಾಹಿತಿಯಂತೆ ಸರಿಸುಮಾರು ೫೬೦೨ ಬೀದಿ ನಾಯಿಗಳಿರುವುದನ್ನು ಅಂದಾಜಿಸಲಾಗಿದೆ. ಪಶುಸಂಗೋಪನಾ ಇಲಾಖೆಯು ನಡೆಸಿರುವ ಗಣತಿಯಂತೆ ಜಿಲ್ಲೆಯಲ್ಲಿ ಇಷ್ಟು ಸಂಖ್ಯೆಯ ಶ್ವಾನಗಳು ಇರುವುದನ್ನು ಗುರುತಿಸಲಾಗಿದೆಯಾದರೂ ಇದನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೂ ಸದ್ಯದ ಮಾಹಿತಿಯನ್ವಯ ೫೬೦೨ ಬೀದಿನಾಯಿಗಳಿರುವುದನ್ನು ಅಂದಾಜು ಮಾಡಲಾಗಿದೆ.

ಪೊನ್ನಂಪೇಟೆ ತಾಲೂಕಿನಲ್ಲಿ ಅತ್ಯಧಿಕ

ಪೊನ್ನಂಪೇಟೆ ತಾಲೂಕಿನಲ್ಲಿನ ಎಲ್ಲಾ ಗ್ರಾ.ಪಂ.ಗಳಲ್ಲಿ ಸೇರಿ ಒಟ್ಟು ೧೮೧೯ ಬೀದಿ ನಾಯಿಗಳಿವೆ. ಇದು ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ೧೪೮೦, ಕುಶಾಲನಗರ ೯೨೫, ವೀರಾಜಪೇಟೆ ೭೪೦ ಹಾಗೂ ಮಡಿಕೇರಿ ತಾಲೂಕಿನಲ್ಲಿ ೬೩೮ ಬೀದಿ ನಾಯಿಗಳನ್ನು ಸದ್ಯದ ಮಟ್ಟಿಗೆ ಗುರುತಿಸಲಾಗಿದ್ದು, ಒಟ್ಟು ಬೀದಿನಾಯಿಗಳ ಸಂಖ್ಯೆ ೫೬೦೨ ರಷ್ಟಿದೆ.

ಒಟ್ಟು ಶ್ವಾನಗಳು ಸರಿಸುಮಾರು ೪೨ ಸಾವಿರ

ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಶ್ವಾನಪ್ರಿಯರು ಇದ್ದು, ತಮ್ಮ ತಮ್ಮ ಮನೆಗಳಲ್ಲಿ ವಿವಿಧ ರೀತಿಯ ಶ್ವಾನಗಳನ್ನು ಸಲಹುತ್ತಿದ್ದಾರೆ. ಇದೀಗ ಸಂಗ್ರಹಿತ ವಿವರದಂತೆ ೫೬೦೨ ಬೀದಿನಾಯಿಗಳೂ ಸೇರಿದಂತೆ ಜಿಲ್ಲೆಯಲ್ಲಿ ಸರಿಸುಮಾರು ೪೨ ಸಾವಿರದಷ್ಟು ನಾಯಿಗಳು ಇರುವುದಾಗಿ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರಾದ ಡಾ. ಡಿ. ಲಿಂಗರಾಜು ಹೆಚ್. ದೊಡ್ಡಮನಿ ಅವರು “ಶಕ್ತಿ''ಗೆ ಮಾಹಿತಿ ನೀಡಿದ್ದಾರೆ.

ಇನ್ನೂ ಅಂತಿಮಗೊಳ್ಳದ ಟೆಂಡರ್

ಬೀದಿನಾಯಿಗಳ ನಿರ್ವಹಣೆ... ಪಾಲನೆಗೆಂದು ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರಗಳನ್ನು ತೆರೆಯಲು ನಗರಾಭಿವೃದ್ಧಿ ಕೋಶದ ಮೂಲಕ ಈಗಾಗಲೇ ಟೆಂಡರ್ ಕರೆಯಲಾಗಿದೆ. ಇಲ್ಲಿ ಬೀದಿನಾಯಿಗಳಿಗೆ ಸಂತಾನಹರಣ ಶಸ್ತçಚಿಕಿತ್ಸೆ ಮಾಡಿ ಈ ಕೇಂದ್ರಕ್ಕೆ ಸೇರಿಸುವ ಉದ್ದೇಶವಿದ್ದು, ಇದಕ್ಕೆ ಎನ್‌ಜಿಓಗಳ ನೆರವನ್ನೂ ಕೋರಲಾಗಿದೆ. ಪ್ರಸ್ತುತ, ಮಡಿಕೇರಿ ನಗರಸಭೆ ಸೇರಿದಂತೆ ವೀರಾಜಪೇಟೆ, ಕುಶಾಲನಗರ ಪುರಸಭೆ, ಸೋಮವಾರಪೇಟೆ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿಗಳಲ್ಲಿ ಈ ಕೇಂದ್ರ ಪ್ರಾರಂಭಿಸಲು ಟೆಂಡರ್ ಕರೆಯಲಾಗಿದೆ. ಆದರೆ ಕೇವಲ ಒಂದೇ ಸಂಸ್ಥೆ ಇದಕ್ಕೆ ಟೆಂಡರ್ ಸಲ್ಲಿಸಿದೆ. ಆದರೆ ಇಲಾಖೆಯ ಮೂಲಕ ನಿಗದಿ ಮಾಡಿರುವ ಮೊತ್ತಕ್ಕಿಂತ ಶೇ. ೨೦ ರಷ್ಟು ಹೆಚ್ಚಿನ ಮೊತ್ತಕ್ಕೆ ಈ ಟೆಂಡರ್ ಸಲ್ಲಿಕೆಯಾಗಿರುವುದರಿಂದ ಇದು ಇನ್ನೂ ಅಂತಿಮಗೊAಡಿಲ್ಲ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸಪ್ಪ ಅವರು ತಿಳಿಸಿದ್ದಾರೆ. - ಶಶಿ ಸೋಮಯ್ಯ