ಮಡಿಕೇರಿ: ಮಡಿಕೇರಿಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಪಾರಿವಾಳಗಳ ಅಪಾರ್ಟ್ಮೆಂಟ್ ಆಗಿ ರೂಪುಗೊಂಡಿದೆ. ಹೌದು ಇದು ಅಚ್ಚರಿ ಆದರೂ ಸತ್ಯ. ನಿಲ್ದಾಣದಲ್ಲಿ ಪಾರಿವಾಳಗಳು ಇದೀಗ ‘ಫುಲ್ ಬ್ಯುಸಿ’ ಆಗಿವೆ. ಸಾಮಾನ್ಯವಾಗಿ ಯಾವುದೇ ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಸ್ಥಳದಲ್ಲಿ ಕಾಣಸಿಗುವ ಈ ಹಕ್ಕಿ ಪ್ರಭೇದಕ್ಕೆ ಚಳಿಗಾಲದಲ್ಲಿ ವಂಶಾಭಿವೃದ್ಧಿ ಮಾಡುವ ಸಮಯ. ಸಿಕ್ಕ ಸಿಕ್ಕಲ್ಲಿಂದ ಹುಲ್ಲು ಕಡ್ಡಿ, ಪ್ಲಾಸ್ಟಿಕ್, ಏನು ಸಿಕ್ಕಿದರೂ ಸರಿ ಒಟ್ಟು ಮಾಡಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡುವ ಕೆಲಸದಲ್ಲಿ ನಿರತವಾಗಿವೆ. ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲೆಯ ಹಲವು ಸಾರಿಗೆ ಬಸ್ ನಿಲ್ದಾಣಗಳಲ್ಲಿ ಈ ಹಕ್ಕಿಗಳು ಗೂಡು ಕಟ್ಟುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ. ಪಾಳು ಬಿದ್ದ ಕಟ್ಟಡಗಳು ಇವುಗಳಿಗೆ ಸುರಕ್ಷಿತ ಸ್ಥಳ.

ಆದರೆ ಕೊಲಂಬಿಯಾ ಜಾತಿಗೆ ಸೇರಿದ ರಾಕ್-ಡವ್ (ಕಾಡು ಪಾರಿವಾಳ) ಬಸ್ ನಿಲ್ದಾಣವನ್ನು ಆಯ್ದುಕೊಂಡಿದೆ. ಕಂದು-ಸಿಮೆAಟ್ ಬಣ್ಣದ ಈ ಪಾರಿವಾಳಗಳು ಗಟ್ಟಿಮುಟ್ಟು ಮನುಷ್ಯರ ವಾತಾವರಣದಲ್ಲೇ ವಾಸಿಸುತ್ತವೆ. ಕಿರಿ ಕಿರಿ ಗಬ್ಬು ವಾಸನೆಯ ಇವುಗಳ ಸಂಸಾರ ನೋಡುವುದಕ್ಕೆ ಒಂದೆಡೆ ಚಂದ ಆದರೆ ಮತ್ತೊಂದು ಕಡೆ ಸಾರ್ವಜನಿಕ ಸ್ಥಳ ಬಸ್ ನಿಲ್ದಾಣದಲ್ಲೇ ವಠಾರ ಮಾಡಿಕೊಳ್ಳುವ ಇವು ಮಾಡುವ ಗಲೀಜು, ಅದರಿಂದ ಬೀರುವ ದುರ್ನಾತ ಸಾರ್ವಜನಿಕರಲ್ಲಿ ಕಿರಿ ಕಿರಿ ಉಂಟು ಮಾಡುತ್ತದೆ, ಇದಕ್ಕೆ ಬಸ್ ನಿಲ್ದಾಣದಲ್ಲಿ ಇರುವ ಸಾರ್ವಜನಿಕರ ಕುರ್ಚಿಗಳು ಸಾಕ್ಷಿ ಹೇಳುತ್ತವೆ. ದೇಶದ ಪ್ರಮುಖ ನಗರಗಳಾದ ಮುಂಬೈ ಹಾಗೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇವುಗಳಿಗೆ ಆಹಾರ ನೀಡುವುದನ್ನು ನಿಷೇಧಿಸಲಾಗಿದೆ. ಇವುಗಳ ಮಲ-ಮೂತ್ರದ ಘಾಟು ಮಾನವನ ಶ್ವಾಸಕೋಶಕ್ಕೆ ಹಾನಿಕಾರಕ ಎಂಬುದು ವೈಜ್ಞಾನಿಕ ಸಂಶೋಧನೆಗಳ ಮೂಲಕ ಸಾಬೀತಾಗಿದ್ದು, ಈ ನಗರಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಷೇಧಿಸಲಾಗಿದೆ. ಆದರೆ ಮಡಿಕೇರಿಯ ಬಸ್ ನಿಲ್ದಾಣಗಳಲ್ಲಿ ಮಾತ್ರ ಇವು ರಾರಾಜಿಸುತ್ತಿದ್ದು, ನಿಲ್ದಾಣದ ಸ್ವಚ್ಛತೆಗೆ ಧಕ್ಕೆ ತರುತ್ತಿವೆ. - ಗಿರಿಧರ್ ಕೊಂಪುಳಿರ