ಸೋಮವಾರಪೇಟೆ, ಜ. ೧೪: ಸರ್ವಧರ್ಮ ಕ್ಷೇತ್ರ ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ವತಿಯಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ನಡೆಯುವ ಜಾತ್ರೋತ್ಸವದ ಅಂಗವಾಗಿ ಕ್ರೀಡಾ ಸಮಿತಿಯ ವತಿಯಿಂದ ಮುಕ್ತ ಫುಟ್ಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ಆಯೋಜಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ. ಮೊಗಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವರಾತ್ರಿ ಅಂಗವಾಗಿ ಪ್ರತಿ ವರ್ಷ ನವದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಫೆ.೧೩ ಮತ್ತು ೧೪ ರಂದು ಜಾತ್ರಾ ಮಹೋತ್ಸವ, ಕ್ರೀಡಾಕೂಟ ಜರುಗಲಿದೆ ಎಂದರು.
ಕ್ರೀಡಾ ಸಮಿತಿ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿ, ಗೌಡಳ್ಳಿಯ ಬಿಜಿಎಸ್ ಶಾಲಾ ಮೈದಾನದಲ್ಲಿ ಹಬ್ಬದ ಪ್ರಯುಕ್ತ ೫ನೇ ವರ್ಷದ ಕ್ರೀಡಾಕೂಟ ಆಯೋಜಿಸಲಾಗಿದೆ. ಫುಟ್ಬಾಲ್‌ಗೆ ಮೊದಲು ನೋಂದಾಯಿಸಿಕೊAಡ ೧೬ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಫುಟ್ಬಾಲ್ ಪಂದ್ಯಾಟ ವಿಜೇತರಿಗೆ ಮೊದಲ ಬಹುಮಾನ ರೂ.೧,೧೧,೧೧೧ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ. ೫೫,೫೫೫ ಹಾಗೂ ಟ್ರೋಫಿ ನೀಡಲಾಗುವುದು. ಫೆ.೧೦ರ ಸಂಜೆ ೪ ಗಂಟೆಯವರೆಗೆ ತಂಡವನ್ನು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಇದರೊಂದಿಗೆ ಮಹಿಳೆಯರ ವಿಭಾಗದ ಥ್ರೋಬಾಲ್ ಪಂದ್ಯಾಟದ ವಿಜೇತರಿಗೆ ರೂ. ೨೨,೨೨೨ ಹಾಗೂ ದ್ವಿತೀಯ ರೂ. ೧೧,೧೧೧ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಮೊದಲ ೧೦ ತಂಡಗಳಿಗೆ ಪಾಲ್ಗೊಳ್ಳಲು ಅವಕಾಶ ಇದ್ದು, ಫೆ.೧೩ರ ಸಂಜೆ ೪ ರೊಳಗೆ ತಂಡವನ್ನು ನೋಂದಾಯಿಸಿಕೊಳ್ಳಬೇಕೆAದರು.
ಫೆ.೧೩ ರಂದು ಬೆಳಿಗ್ಗೆ ಪಶು ಚಿಕಿತ್ಸಾ ಶಿಬಿರ ನಡೆಯಲಿದೆ. ೯:೩೦ಕ್ಕೆ ಕ್ರೀಡಾಕೂಟದ ಉದ್ಘಾಟನೆಯಾಗಲಿದೆ. ಫೆ.೧೪ ರಂದು ಬೆಳಿಗ್ಗೆ ೮ ಗಂಟೆಗೆ ಮುಕ್ತ ಗುಡ್ಡಗಾಡು ಓಟದ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಫೆ.೧೫ರ ರಾತ್ರಿ ವೀರಗಾಸೆ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮ ನಡೆಯುವ ಮೂರು ದಿನಗಳ ಕಾಲ ಸಾರ್ವಜನಿಕರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ಕ್ರೀಡಾಕೂಟದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಮೊ: ೯೪೮೧೮೧೫೪೪೬, ೯೪೮೦೮೫೩೫೩೭ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.
ಗೋಷ್ಠಿಯಲ್ಲಿ ಕ್ರೀಡಾ ಸಮಿತಿ ಉಪಾಧ್ಯಕ್ಷ ಸುಮಂತ್ ಕೂಗೂರು, ಕಾರ್ಯದರ್ಶಿ ಸಿ.ಇ. ವೆಂಕಟೇಶ್ ಹಾಗೂ ಖಜಾಂಚಿ ಜಿ.ಎ. ಯೋಗೇಶ್ ಇದ್ದರು.