ಕಡಂಗ, ಜ. ೧೪: ಕಡಂಗ ಕೊಕ್ಕಂಡಬಾಣೆ ದರ್ಗಾ ಶರೀಫ್ನಲ್ಲಿ ವಾರ್ಷಿಕವಾಗಿ ಆಚರಿಸಲ್ಪಡುವ ಉರೂಸ್ ಕಾರ್ಯಕ್ರಮ ತಾ. ೧೬ ರಿಂದ ೨೦ ರವರೆಗೆ ನಡೆಯಲಿದೆ ಎಂದು ಮನಷ್ಯಲ್ ಉಲೂಮ್ ಮದರಸದ ಪ್ರಾಂಶುಪಾಲ ಸುಹೈಬ್ ಫೈಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಜುಮಾ ನಮಾಜ್ ಬಳಿಕ ಮುಹಿಯದ್ದೀನ್ ಜುಮಾ ಮಸೀದಿಯಿಂದ ದರ್ಗಾದವರೆಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು, ಮಕಾಮ್ ಆಲಂಕಾರ ಮತ್ತು ಪ್ರಾರ್ಥನೆಗೆ ಮೋಹಿಯದೀನ್ ಜುಮಾ ಮಸೀದಿ ಖತೀಬ್ ರಫೀಕ್ ಲತೀಫ್ ನೇತೃತ್ವ ವಹಿಸಲಿದ್ದಾರೆ. ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷ ಅಬ್ದುಲ್ಲ ನೆರವೇರಿಸಲಿದ್ದಾರೆ.
ರಾತ್ರಿ ನಡೆಯುವ ಪ್ರಾರ್ಥನಾ ಸಮಾವೇಶ ಮತ್ತು ಮಜಲಿಸುನೂರ್ ಕಾರ್ಯಕ್ರಮದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಜಿ ಮತ್ತು ಸೈಯದ್ ನೇತೃತ್ವ ವಹಿಸಲಿದ್ದಾರೆ.
ಐದು ದಿನಗಳ ವಿವಿಧ ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ ಪಂಡಿತರು, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ. ಪ್ರಮುಖವಾಗಿ ಎಲ್ಲಾ ವರ್ಷದಂತೆ ಉರೂಸ್ ಕಾರ್ಯಕ್ರಮದ ದಿನಾಂಕ ಘೋಷಣೆಯ ಪ್ರಾರಂಭದಿAದಲೂ ಪಾಲಚಂಡ ಕುಟುಂಬಸ್ಥರು ಉರೂಸ್ ಮುಕ್ತಾಯದವರೆಗೆ ಎಲ್ಲಾ ಕಾರ್ಯಕ್ರಮಕ್ಕೆ ಸಹಕರಿಸಲಿದ್ದು, ಇದೊಂದು ಭಾವೈಕ್ಯತೆಯ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ. ಸೋಮವಾರ ಮತ್ತು ಮಂಗಳವಾರ ಸಂಜೆ ೪ ಗಂಟೆಗೆ ಅನ್ನದಾನ ಏರ್ಪಡಿಸಲಾಗಿದ್ದು, ೫ ದಿನಗಳ ಕಾರ್ಯಕ್ರಮದಲ್ಲಿ ರಾತ್ರಿ ೭ಕ್ಕೆ ವಿದ್ಯಾರ್ಥಿಗಳ ಮತ್ತು ರಾತೀಬ್ ಸಂಘದ ವತಿಯಿಂದ ದಫ್ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಸುಹೈಬ್ ಫೈಜಿ ಮಾಹಿತಿ ನೀಡಿದ್ದಾರೆ.