ಕೂಡಿಗೆ, ಜ. ೧೬: ಕೃಷಿ ಕ್ಷೇತ್ರದಲ್ಲಿನ ಕೊಡುಗೆ ಗುರುತಿಸಿ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಅವರಿಗೆ ಕರ್ನಾಟಕ ಸರ್ಕಾರದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಫೆಲೋಶಿಪ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಕರ್ನಾಟಕ ಸರ್ಕಾರದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸಭಾಂಗಣದಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೋಸ್‌ರಾಜು ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಬಾಗಲಕೋಟೆ ಜಿಲ್ಲೆಯ ಬೇವೂರು ಗ್ರಾಮದವರಾದ ಅಶೋಕ ಅವರು, ಅಂತರರಾಷ್ಟಿçÃಯ ಮಟ್ಟದ ವಿಜ್ಞಾನಿಯಾಗಿ, ಶೈಕ್ಷಣಿಕ ಸುಧಾರಕರಾಗಿ ಮತ್ತು ಕೊಡಗು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿ ಕ್ರಿಯಾಶೀಲತೆಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು ಇವರಿಗೆ ಈ ಪ್ರಶಸ್ತಿ ಲಭಿಸಿದೆ.

ಕೃಷಿ, ತೋಟಗಾರಿಕೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಗ್ರಾಮೀಣಾಭಿವೃದ್ಧಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಸುಮಾರು ಎರಡೂವರೆ ದಶಕಗಳ (೨೫ ವರ್ಷಗಳು) ಸುದೀರ್ಘ ಅನುಭವವನ್ನು ಪ್ರೊ. ಆಲೂರ ಹೊಂದಿದ್ದಾರೆ.

ಧಾರವಾಡದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನದಲ್ಲಿ ಬಿ.ಎಸ್.ಸಿ ಮತ್ತು ಎಂ.ಎಸ್.ಸಿ ಪದವಿಗಳನ್ನು ಇವರು ಪಡೆದಿದ್ದಾರೆ. ರಾಜ್ಯಾದ್ಯಂತ ಸುಮಾರು ೧,೨೫೦ಕ್ಕೂ ಹೆಚ್ಚು ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಿ, ಪೋಷಿಸಿದ್ದಾರೆ.