ಮಡಿಕೇರಿ, ಜ. ೧೬: ಜಿಲ್ಲೆ ಹಾಗೂ ರಾಜ್ಯದಲ್ಲಿ ತಲೆದೋರಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕೊಡಗು ಜಿಲ್ಲಾ ಸಮಿತಿಯು ಜನಾಗ್ರಹ ಸಮಾವೇಶವನ್ನು ಹಮ್ಮಿಕೊಂಡಿದೆ ಎಂದು ಪ್ರಮುಖರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಡಿಪಿಐ ಜಿಲ್ಲಾಧ್ಯಕ್ಷ ಹಾಗೂ ನಗರಸಭೆ ಸದಸ್ಯ ಅಮೀನ್ ಮೊಹಿಸಿನ್, ತಾ. ೧೮ರಂದು ಬೆ. ೧೦.೩೦ ಗಂಟೆಗೆ ನಗರದ ಎ.ವಿ ಶಾಲೆ ಬಳಿಯಿಂದ ಮೆರವಣಿಗೆ ಆರಂಭಗೊAಡು ಗಾಂಧಿ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಜನರ ದಿಕ್ಕು ತಪ್ಪಿಸುವವರ ವಿರುದ್ಧ ಎಸ್ಡಿಪಿಐ ಹೋರಾಟ ನಿರಂತರವಾಗಿರಲಿದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ಸಂವಿಧಾನ ಬಾಹಿರ ಕ್ರಮವಾಗಿದ್ದು, ತಕ್ಷಣ ಇದನ್ನು ಕೈಬಿಡಬೇಕು. ಅನರ್ಹರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಬದಲು ಅರ್ಹ ಮತದಾರರ ದಾಖಲೆಗಳನ್ನು ಅಸಿಂಧು ಮಾಡಿ ದೇಶದ ಪೌರತ್ವದಿಂದ ಹೊರಗಿಡುವ ದೊಡ್ಡ ಷಡ್ಯಂತ್ರ ನಡೆಯುತ್ತಿದ್ದು, ಇದು ಬಹಳ ಅಪಾಯಕಾರಿ ಹೆಜ್ಜೆ. ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಗೆ ದಕ್ಕೆ ಉಂಟುಮಾಡಲಿದೆ ಎಂದು ಕಿಡಿಕಾರಿದರು. ಪೂರ್ಣ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಮೌನ ವಹಿಸದೆ, ಕೂಡಲೇ ಮಂತ್ರಿ ಮಂಡಲ ಸಭೆ ಕರೆದು ಸಿಂಗಲ್ ಅಜೆಂಡಾದಲ್ಲಿ ಇದರ ವಿರುದ್ಧ ಠರಾವು ಪಾಸ್ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕೆಂದು ಆಗ್ರಹಿಸಿದರು. ಕೃಷಿ ಮಾಡಿಕೊಂಡು ಬದುಕುತ್ತಿರುವ ರೈತರ ಜಮೀನನ್ನು ಸಿ ಮತ್ತು ಡಿ ವ್ಯಾಪ್ತಿಗೆ ತಂದು ಸೆಕ್ಷನ್ ೪ರಡಿ ನೋಟೀಸ್ ಜಾರಿ ಮಾಡಿರುವುದು ಖಂಡನೀಯವಾಗಿದ್ದು, ಸೆ. ೫೭ರಡಿ ಜಮೀನನ್ನು ಸಕ್ರಮಗೊಳಿಸಬೇಕು. ಮಾನವ-ವನ್ಯಪ್ರಾಣಿ ಸಂಘರ್ಷದಿAದ ಕೊಡಗಿನ ಕೃಷಿ ಕಾರ್ಮಿಕರು ಹಾಗೂ ಜನಸಾಮಾನ್ಯರು ಪ್ರಾಣ ಕಳೆದುಕೊಳ್ಳುತ್ತಿದ್ದು, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಮಸ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗುತ್ತಿದೆ.. ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ನಿವೇಶನ ಹಾಗೂ ವಸತಿ ವಂಚಿತರು ಸಾಕಷ್ಟಿದ್ದು, ಶೀಘ್ರ ವಸತಿ, ನಿವೇಶನ ಹಂಚಬೇಕು. ನಮೂನೆ ೫೦, ೫೩, ೫೭ ಹಾಗೂ ೯೪ಸಿ, ೯೪ಸಿಸಿ ಅಡಿ ಹಕ್ಕು ನೀಡಲು ತ್ವರಿತ ಕ್ರಮಕೈಗೊಂಡು ಸಮಿತಿ ರಚಿಸಿ ಸಕ್ರಮಗೊಳಿಸಬೇಕು. ಜೀವನದಿ ಕಾವೇರಿ ಮಲಿನಗೊಳ್ಳದಂತೆ ಕ್ರಮ ವಹಿಸಬೇಕೆಂದು ಅಮೀನ್ ಮೊಹಿಸಿನ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷ ಮನ್ಸೂರ್ ಆಲಿ, ಕಾರ್ಯದರ್ಶಿ ಮೇರಿ ವೇಗಸ್, ಸದಸ್ಯ ಅಬ್ದುಲ್ ಅಡ್ಕರ್, ನಗರಾಧ್ಯಕ್ಷ ಮೊಹಮ್ಮದ್ ಅಲಿ, ನಗರಸಭಾ ಸದಸ್ಯೆ ನೀಮಾ ಅರ್ಷದ್ ಹಾಜರಿದ್ದರು.