ಮಡಿಕೇರಿ, ಜ. ೧೬: ಕೊಡಗು ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕ್ಷೇಮ ನಿಧಿಯನ್ನು ಕ್ರೋಢೀಕರಿಸುವ ಮಹತ್ವದ ಚಿಂತನೆಗಳ ಹಿನ್ನೆಲೆಯಲ್ಲಿ ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿಯಿಂದ ತಾ. ೧೮ರಂದು ನಗರದಲ್ಲಿ ಪತ್ರಕರ್ತರ ಸಂಕ್ರಾAತಿ ಕ್ರಿಕೆಟ್ ಸಂಭ್ರಮ-೨೦೨೬ ಆಯೋಜಿತವಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಡಗು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯ ಅಧ್ಯಕ್ಷ ಜಿ.ವಿ.ರವಿ ಕುಮಾರ್, ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ, ಸರ್ಕಾರದ ಅಧಿಕೃತ ಮಾನ್ಯತೆ ಪಡೆದ ಕೆಲವೇ ಕೆಲವು ಪತ್ರಕರ್ತರಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ತಲುಪುತ್ತಿದೆ.ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಸೌಲಭ್ಯಗಳಿಂದ ವಂಚಿತರಾಗಿ, ಸಂಕಷ್ಟದ ಸಂದರ್ಭಗಳಲ್ಲಿ ತೊಂದರೆಗೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಎಂ ಅಂಡ್ ಎಂ ಹಾಗೂ ಲೀಡಿಂಗ್ ಎಡ್ಜ್ ಪ್ರಾಯೋಜಿತ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯನ್ನು ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವುದಾಗಿ ತಿಳಿಸಿದರು.
ಸಂಭ್ರಮದ ಕ್ರಿಕೆಟ್ ಪಂದ್ಯಾವಳಿ : ಸಂಕ್ರಾAತಿ ಕ್ರಿಕೆಟ್ ಸಂಭ್ರಮ ಪಂದ್ಯಾವಳಿಯಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ತಂಡದ ನಡುವೆ ಅಂದು ಬೆಳಿಗ್ಗೆ ೯ ಗಂಟೆಗೆ ಸೌಹಾರ್ದ ಪಂದ್ಯ ನಡೆಯಲಿದೆ. ಬಳಿಕ ಪತ್ರಕರ್ತರ ನಾಲ್ಕು ತಂಡಗಳಾದ ಸಿರಿ, ಸಮೃದ್ಧಿ, ಹೊನ್ನು ಮತ್ತು ಸುಗ್ಗಿ ನಡುವೆ ಪಂದ್ಯಗಳು ನಡೆಯಲಿದೆಯೆಂದು ತಿಳಿಸಿದರು.
ಪಂದ್ಯಾವಳಿಯನ್ನು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಹಾಗೂ ಎಂಎಲ್‌ಸಿ ಎಂ.ಪಿ. ಸುಜಾ ಕುಶಾಲಪ್ಪ ಅವರು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಉದ್ಯಮಿಗಳು, ಸಮಾಜ ಸೇವಕರಾದ ನಾಪಂಡ ಮುತ್ತಪ್ಪ, ನಾಪಂಡ ಮುದ್ದಪ್ಪ ಉದ್ಘಾಟಿಸಲಿದ್ದಾರೆ. ಕ್ರೀಡಾ ಪಟುಗಳ ಜೆರ್ಸಿಗಳನ್ನು ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಎಡಿಕೇರಿ ಪ್ರಸನ್ನ ಅನಾವರಣಗೊಳಿಸಲಿದ್ದಾರೆ. ದಾನಿಗಳಿಂದ ಸಂಗ್ರಹವಾದ ಹಣವನ್ನು ಪತ್ರಕರ್ತರ ಸಂಘದ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಬಳಸಲಾಗುತ್ತದೆ. ಸಂಜೆ ೫ ಗಂಟೆಗೆ ಸಮಾರೋಪ ನಡೆಯಲಿದೆಯೆಂದು ತಿಳಿಸಿದರು.
ಕೊಡಗು ಪತ್ರ‍್ರಕರ್ತರ ಸಂಘÀದ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಕೊಡಗು ಪತ್ರಕರ್ತರ ಸಂಘÀ ಅಸ್ತಿತ್ವಕ್ಕೆ ಬಂದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ತನ್ನ ಧ್ಯೇಯ ವಾಕ್ಯವಾದ ‘ಸ್ವಾಸ್ಥö್ಯ-ಸುಂದರ-ಸದೃಢ ಸಮಾಜ ನಿರ್ಮಾಣ’ಕ್ಕಾಗಿ ಹತ್ತಾರು ಜನಪರವಾದ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದೆ. ಇದೀಗ ಪತ್ರಕರ್ತರ ಹಿತ ಕಾಯುವ ನಿಟ್ಟಿನಲ್ಲಿ ಸಂಕ್ರಾAತಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು.
ಸಂಘದ ಗೌರವ ಸಲಹೆಗಾರ ಟಿ.ಪಿ.ರಮೇಶ್ ಮಾತನಾಡಿ, ಸದಸ್ಯರ ಸಂಕಷ್ಟಗಳಿಗೆ ನೆರವಾಗುವ ನಿಟ್ಟಿನಲ್ಲಿ ಕ್ಷೇಮ ನಿಧಿ ಯಾವತ್ತೂ ಸಂಘಕ್ಕೆ ಪೂರಕವಾದುದು. ಪತ್ರಕರ್ತರು ಕರ್ತವ್ಯದ ಸಂದರ್ಭ ಅನಿರೀಕ್ಷಿತವಾಗಿ ಆರೋಗ್ಯ ಸಮಸ್ಯೆಗಳಿಗೆ ತುತ್ತಾದ ಸಂದರ್ಭ, ಅವರಿಗೆ ಸ್ಪಂದಿಸುವ ಕೆಲಸ ಸಂಘದಿAದ ಯಾವತ್ತೂ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕ್ಷೇಮ ನಿಧಿ ಸಂಗ್ರಹ ಅತ್ಯಂತ ಮಹತ್ವದ್ದೆಂದು ತಿಳಿಸಿದರು.
ಸರಕಾರ ಅನುದಾನ ನೀಡಲಿ : ಸಂಘದ ಗೌರವ ಸಲಹೆಗಾರರಾದ ಬಿ.ಜಿ.ಅನಂತಶಯನ ಅವರು, ಗುಪ್ತಗಾಮಿನಿಯಂತೆ ಸದಾ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಪತ್ರಕರ್ತರ ಕೆಲಸ ಯಾವತ್ತೂ ಹೊರ ಜಗತ್ತಿಗೆ ಕಾಣಿಸುವುದೇ ಇಲ್ಲ. ಈ ಹಿನ್ನೆಲೆ ಸರ್ಕಾರವು ಪತ್ರಕರ್ತರಿಗೆ ಅಗತ್ಯ ಸೌಲಭ್ಯಗಳನ್ನು ನೀಡಲು ಮುಂದಾಗುವುದಿಲ್ಲ. ಇನ್ನಾದರೂ ಕೊಡಗಿನಲ್ಲಿ ಅಧಿಕೃತವಾಗಿ ನೋಂದಾಯಿತವಾದ ಕೊಡಗು ಪತ್ರಕರ್ತರ ಸಂಘಕ್ಕೆ ೫೦ ಲಕ್ಷದ ದೊಡ್ಡ ಮೊತ್ತವನ್ನು ಮುಖ್ಯಮಂತ್ರಿಗಳ ಮೂಲಕ ಒದಗಿಸಲು ಸ್ಥಳೀಯ ಜನಪ್ರತಿನಿಧಿಗಳು ಮುಂದಾಗುವAತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಕೊಡಗು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಅರುಣ್ ಕೂರ್ಗ್, ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಉಪಸ್ಥಿತರಿದ್ದರು.