ಮಡಿಕೇರಿ, ಜ. ೧೭; ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡವರು, ಮಹಿಳೆಯರು, ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದು, ಇದರಿಂದಾಗಿ ಬಡತನ ಪ್ರಮಾಣ ಶೇ.೧೨ರಷ್ಟು ಇಳಿಕೆಯಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಮೆಹರೋಝ್ ಖಾನ್ ಹೇಳಿದರು.
ಕೊಡಗು ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ರಸ್ತೆಯಲ್ಲಿರುವ ಆಕ್ಸಿ ರಿಚ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ಬಡತನ ಕಡಿಮೆ ಮಾಡಬೇಕು, ಮಹಿಳೆ ಹಾಗೂ ಯುವಕರ ಸಬಲೀಕರಣದೊಂದಿಗೆ ಶಕ್ತಿ ತುಂಬಬೇಕೆAಬ ಉದ್ದೇಶದೊಂದಿಗೆ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಚುನಾವಣಾ ಸಂದರ್ಭ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯಂತೆ ಯೋಜನೆಗಳನ್ನು ಜಾರಿಗೊಳಿಸಿ ಅರ್ಹರಿಗೆ ತಲಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಶೇ.೯೭ರಿಂದ ೯೮ರಷ್ಟು ಅನುಷ್ಠಾನ ಆಗಿದ್ದು, ಕೊಡಗು ಜಿಲ್ಲೆಯಲ್ಲಿ ಉತ್ತಮವಾಗಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದಲ್ಲಿ ಬಡತನ ಪ್ರಮಾಣ ಶೇ.೧೨ರಷ್ಟು ಇಳಿಕೆಯಾಗಿದೆ. ಗ್ರಾಮೀಣ ಭಾಗದಿಂದ ವಲಸೆ ಪ್ರಮಾಣ ಶೇ.೧೫, ಅನ್ನಭಾಗ್ಯದಿಂದಾಗಿ ಅಪೌಷ್ಟಿಕತೆ ಶೇ.೫೦ರಷ್ಟು ಕಡಿಮೆಯಾಗಿದೆ. ನಿರುದ್ಯೋಗ ಸಮಸ್ಯೆ ಶೇ.೪.೩ರಿಂದ ೨.೫ಕ್ಕೆ ಇಳಿದಿದೆ. ಮಹಿಳಾ ಉದ್ಯೋಗಶೀಲತೆ ಶೇ.೨೫ರಿಂದ ೩೦ಕ್ಕೆ ಏರಿಕೆಯಾಗಿದೆ. ದೇಶದ ತಲಾ ಆದಾಯದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ವಿದೇಶದ ನೇರ ಬಂಡವಾಳ ಹೂಡಿಕೆಯಲ್ಲಿಯೂ ಎರಡನೇ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.
ಕಲ್ಯಾಣ ರಾಜ್ಯ ನಿರ್ಮಾಣ ಸರಕಾರದ ಧ್ಯೇಯವಾಗಿದ್ದು, ಉತ್ತಮ ಅಭಿವೃದ್ಧಿ ಕಾರ್ಯಗಳಿಂದ ಮಾತ್ರ ಇದು ಸಾಧ್ಯ. ಒಟ್ಟು ೨ಲಕ್ಷ ಕೋಟಿ ಹಣ ಅಭಿವೃದ್ಧಿ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಕಾರ್ಯಗಳಿಗಾಗಿ ನೀಡಲಾಗಿದ್ದು, ತೆರಿಗೆ, ಹಣ ಕ್ರೋಢೀಕರಣ ಕೂಡ ಉತ್ತಮವಾಗಿ ಆಗುತ್ತಿದೆ. ಕಟ್ಟಡ, ರಸ್ತೆ, ಸೇತುವೆ ನಿರ್ಮಾಣದಿಂದ ಮಾತ್ರ ಅಭಿವೃದ್ಧಿ ಅಲ್ಲ; ಜನ ಸಾಮಾನ್ಯರ ಅಭಿವೃದ್ಧಿ ಕೂಡ ಆಗಬೇಕೆಂದು ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲೆಗೆ ಅಧಿಕ ಅನುದಾನ
ಪಂಚ ಗ್ಯಾರಂಟಿ ಯೋಜನೆ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ, ರಸ್ತೆಗಳು ಹದಗೆಟ್ಟಿವೆ, ಅನುದಾನವಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೆಹರೋಝ್; ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಾಗುವದರಿಂದ ರಸ್ತೆಗಳು ಬೇಗನೇ ಗುಂಡಿ ಬೀಳುತ್ತವೆ. ಇದೀಗ ನೂತನ ಶಾಸಕರುಗಳು ಆಯ್ಕೆಯಾಗಿ ಬಂದ ಬಳಿಕ ಜಿಲ್ಲೆಗೆ ಅಧಿಕ ಅನುದಾನ ಬಿಡುಗಡೆಯಾಗಿದೆ. ಹಿಂದಿನ ಸಾಲಿಗೆ ಹೋಲಿಕೆ ಮಾಡಿದರೆ ಅಭಿವೃದ್ಧಿ ಕಾಮಗಾರಿಗಳಾಗುತ್ತಿವೆ. ಪ್ರತಿ ಕ್ಷೇತ್ರಕ್ಕೆ ೨೫೦ ಕೋಟಿ ಅನುದಾನ ಬಂದಿದೆ. ಇನ್ನೂ ೮೦ಕೋಟಿ ಬರುತ್ತದೆ, ಆಸ್ಪತ್ರೆ, ಶಾಲೆಗಳಿಗೆ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ದನಿಗೂಡಿಸಿ ವೀರಾಜಪೇಟೆ ರಸ್ತೆ ಕಾಮಗಾರಿಗೆ ಈಗಾಗಲೇ ೧೩ ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಆಗಿದ್ದು, ನೀರಿನ ಪೈಪ್ ಅಳವಡಿಸುವ ಕಾರ್ಯ ಆಗುತ್ತಿರುವದರಿಂದ ವಿಳಂಬವಾಗಿದೆ. ಜಿಲ್ಲೆಯ ಎಲ್ಲ ರಸ್ತೆಗಳ ಗುಂಡಿಮುಚ್ಚುವ ಕೆಲಸ ಆಗಿದೆ. ಭಾಗಮಂಡಲ ರಸ್ತೆ ದುರಸ್ತಿ ಕಾರ್ಯ ಕೂಡ ಆಗಿದೆ. ಇದರೊಂದಿಗೆ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕಾರ್ಯ ಕೂಡ ಆಗುತ್ತಿದೆ. ಈ ಬಾರಿ ಹೆಚ್ಚಿಗೆ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಗೃಹಲಕ್ಷಿö್ಮ ನಿಲ್ಲಿಸಿಲ್ಲ
ಕಳೆದ ಕೆಲವು ತಿಂಗಳಿನಿAದ ಗೃಹಲಕ್ಷಿö್ಮ ಹಣ ಸ್ಥಗಿತಗೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಾನ್; ಹಣ ಕೊಡುವದನ್ನು ನಿಲ್ಲಿಸಿಲ್ಲ, ತಾಂತ್ರಿಕ ದೋಷಗಳಿಂದಾಗಿ ವಿಳಂಬವಾಗಿದೆ. ಯಾವದೇ ಭ್ರಷ್ಟಾಚಾರವಿಲ್ಲದೆ ಗ್ಯಾರಂಟಿ ಯೋಜನೆ ಹಣವನ್ನು ನೇರವಾಗಿ ಫಲಾನುಭವಿಗಳಿಗೆ ತಲಪಿಸಲಾಗುತ್ತಿದೆ. ಮೂರು ತಿಂಗಳಿAದ ಬಾಕಿ ಇದ್ದು, ಒಮ್ಮೆಲೆ ಬರಲಿದೆ ಎಂದು ತಿಳಿಸಿದರು.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸರಿಯಾಗಿ ವೇತನ ಸಿಗುತ್ತಿಲ್ಲವೆಂಬ ಪ್ರಶ್ನೆಗೆ ಉತ್ತರಿಸಿದ ಅವರು; ಈ ಬಗ್ಗೆ ಮಾಹಿತಿ ಇಲ್ಲ, ವಿಚಾರಣೆ ಮಾಡುವದಾಗಿ ಹೇಳಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ. ಅನಿಲ್ ಸ್ವಾಗತಿಸಿ, ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ. ರವಿಕುಮಾರ್ ವೇದಿಕೆಯಲ್ಲಿದ್ದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ವೈ. ರಾಜೇಶ್, ಪ್ರಮುಖರಾದ ಮುನೀರ್ ಅಹ್ಮದ್, ಅಂಬೇಕಲ್ಲು ನವೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಹಂಸ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್, ಕೊಲ್ಯದ ಗಿರೀಶ್, ಇತರರು ಇದ್ದರು.