ಮಡಿಕೇರಿ, ಜ. ೧೭: ಮಡಿಕೇರಿ ತಾಲೂಕಿನಾದ್ಯಂತ ಸುಮಾರು ೧೬೦೦ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರೋಟರಿ ಮಿಸ್ಟಿಹಿಲ್ಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದೊಂದಿಗೆ ಎರಡು ದಿನಗಳ ವಿದ್ಯಾರ್ಥಿಗಳ ಪ್ರೇರಣಾ ಮತ್ತು ವೃತ್ತಿ ಮಾರ್ಗದರ್ಶನ ಶಿಬಿರ ಯಶಸ್ವಿಯಾಗಿ ನೆರವೇರಿತು.
ಶಾಸಕ ಡಾ. ಮಂತರ್ ಗೌಡ ಅವರು, ಮೂರ್ನಾಡು ಹಾಗೂ ಮಡಿಕೇರಿಯಲ್ಲಿ ಶಿಬಿರ ಉದ್ಘಾಟಿಸಿ, ವಿದ್ಯಾರ್ಥಿಗಳು ಆತ್ಮಶಕ್ತಿ ಬೆಳೆಸಿಕೊಂಡು ತಮ್ಮ ಕೌಶಲ್ಯದ ಮೇಲೆ ನಂಬಿಕೆ ಇರಿಸಿ ಗುರಿ ಸಾಧಿಸಬೇಕೆಂದು ಕರೆ ನೀಡಿದರು.
ಪೂರ್ಣ ಶ್ರಮ ಹಾಕಿ ಪರೀಕ್ಷೆ ಎದುರಿಸಬೇಕು. ಫಲಿತಾಂಶ ಏನೇ ಬಂದರೂ ಸಮಭಾವದಿಂದ ಎದುರಿಸಬೇಕೆಂದು ಕಿವಿಮಾತು ಹೇಳಿದರು.
ಪರೀಕ್ಷೆಯನ್ನು ಒಂದು ಹಬ್ಬ ಎಂದು ಪರಿಗಣಿಸಿ, ಶಿಸ್ತು, ಸಂಯಮದಿAದ ಹೆಜ್ಜೆ ಇರಿಸಿದರೆ ಯಶಸ್ಸು, ನೆಮ್ಮದಿ ಖಚಿತ ಎಂದು ಸಂಪನ್ಮೂಲ ವ್ಯಕ್ತಿಗಳಾಗಿ ನಾಪೋಕ್ಲು ಮತ್ತು ಮೂರ್ನಾಡಿಗೆ ಆಗಮಿಸಿದ ರೋಟರಿ ಜಿಲ್ಲೆಯ ಮಾಜಿ ರಾಜ್ಯಪಾಲ ವಿಕ್ರಂ ದತ್ತ, ಕ. ಭಂಡಾರಿ ಮತ್ತು ಮಡಿಕೇರಿಗೆ ಆಗಮಿಸಿದ ಡಾ. ಜಮೀರ್ ಅಹಮ್ಮದ್ ಮತ್ತು ಡಾ. ಸುದರ್ಶನ್ ಭರವಸೆ ಇತ್ತರು.
ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ವೃತ್ತಿ ಮಾರ್ಗದರ್ಶನದ ಕುರಿತು ವಿಸ್ತೃತವಾಗಿ ವಿವರಣೆ ನೀಡಲಾಯಿತು. ತಾ. ೧೬ ರಂದು ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗಣ, ಮೂರ್ನಾಡು ಅನುದಾನಿತ ಪ್ರೌಢಶಾಲೆ ಮತ್ತು ಇಂದು ಮಡಿಕೇರಿ ಸಂತ ಮೈಕಲರ ಶಾಲಾ ಸಭಾಂಗಣದಲ್ಲಿ ತರಬೇತಿ ಏರ್ಪಡಿಸಲಾಗಿತ್ತು.
ಆಯಾ ಶಾಲಾ ಆಡಳಿತ ಮಂಡಳಿ, ಬೋಧಕ ವರ್ಗ, ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗ ಶಿಬಿರಕ್ಕೆ ಕೈಜೋಡಿಸಿದರು.
ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಕಾರಿಯಪ್ಪ, ಇಂಟರಾಕ್ಟ್ ಚೇರ್ಮನ್ ಬಿ.ಜಿ. ಅನಂತಶಯನ, ನಿಯೋಜಿತ ಅಧ್ಯಕ್ಷ ರಾಜೇಶ್ ಹಾಗೂ ಸದಸ್ಯರು ಹಾಜರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಮಹೇಶ್, ಡಿಡಿಪಿಐ ಬಸವರಾಜು, ಸಂಚಾಲಕಿ ಜಾನೆಟ್ ಉಸ್ತುವಾರಿ ವಹಿಸಿದ್ದರು.