ಮಡಿಕೇರಿ, ಜ. ೧೭: ದಕ್ಷಿಣ ಕರ್ನಾಟಕದ ದಕ್ಷಿಣ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೈನಿಕ ಶಾಲೆಗೆ ಸೇರ್ಪಡೆಯಾಗಲು ಈ ವ್ಯಾಪ್ತಿಯಲ್ಲಿ ಪರೀಕ್ಷಾ ಮಾರ್ಗದರ್ಶಿ ಶಿಬಿರಗಳು ಹೆಚ್ಚಾಗಬೇಕೆಂದು ಸರಗೂರುವಿನಲ್ಲಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಹಾಯಕ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಶಿಕ್ಷಣ ಕಾರ್ಯಕ್ರಮಗಳ ಮುಖ್ಯಸ್ಥ ಪ್ರವೀಣ್ ಕುಮಾರ್ ಎಸ್ ಅಭಿಪ್ರಾಯಪಟ್ಟರು.

ನಗರದ ರೋಟರಿ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ೧೦ ಭಾನುವಾರಗಳಂದು ಆಯೋಜಿಸಲಾಗಿದ್ದ ಸೈನಿಕ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರವೀಣ್ ಕುಮಾರ್ ಮಾತನಾಡಿದರು.

ಸೈನಿಕ ಶಾಲೆಗೆ ಸೇರ್ಪಡೆಯಾಗಬೇಕೆಂಬುದು ಅನೇಕ ವಿದ್ಯಾರ್ಥಿಗಳು, ಪೋಷಕರ ಆಸೆಯಾಗಿರುತ್ತದೆ. ಆದರೆ ಈ ನಿಟ್ಟಿನಲ್ಲಿ ಸೂಕ್ತವಾದ ಪರೀಕ್ಷಾ ಮಾರ್ಗದರ್ಶನ ಮತ್ತು ತರಬೇತಿಯ ಕೊರತೆ ಈವರೆಗೂ ಕಾಡುತ್ತಿತ್ತು. ಸೈನಿಕ ಶಾಲೆಯ ಆಯ್ಕೆಗಾಗಿ ಬಹುಮುಖ್ಯವಾದ ಪರೀಕ್ಷೆಯ ಹಂತದಲ್ಲಿ ಬಹುತೇಕ ವಿದ್ಯಾರ್ಥಿಗಳು ಮಾರ್ಗದರ್ಶನದ ಕೊರತೆಯಿಂದ ಆಯ್ಕೆಯಾಗದೇ ಸೈನಿಕ ಶಾಲೆಗೆ ಸೇರ್ಪಡೆಯಾಗುವ ಕನಸು ನನಸಾಗದೇ ನಿರಾಶರಾಗುತ್ತಿದ್ದರು. ಇದನ್ನು ಗಮನಿಸಿಯೇ ಸರಗೂರಿನಲ್ಲಿ ಕಳೆದ ವರ್ಷಗಳಿಂದ ಕಾರ್ಯಚರಿಸುತ್ತಿರುವ ವಿವೇಕಾನಂದ ಯೂತ್ ಮೂವ್‌ಮೆಂಟ್ ಆಶ್ರಯದಲ್ಲಿ ಸೈನಿಕಶಾಲೆ ವತಿಯಿಂದ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ೧೦ ಭಾನುವಾರಗಳಂದು ಮಡಿಕೇರಿಯಲ್ಲಿ ಪರೀಕ್ಷಾ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಸೂಕ್ತವಾದ ಮಾರ್ಗದರ್ಶನ ದೊರಕಿದೆ ಎಂದು ನುಡಿದರು.

ಶಿಬಿರದ ಸಂಚಾಲಕ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ನಿರ್ದೇಶಕ ಡಾ ಸಿ.ಆರ್ ಪ್ರಶಾಂತ್ ಮಾತನಾಡಿ, ಪೋಷಕರು ಕೂಡ ಅತ್ಯಂತ ಉತ್ಸುಕತೆಯಿಂದ ಈ ಶಿಬಿರದಲ್ಲಿ ಪಾಲ್ಗೊಂಡಿದ್ದು ಸಂತೋಷ ತಂದಿದೆ. ಈ ರೀತಿ ಪೋಷಕರೂ ಸೈನಿಕ ಶಾಲೆಗೆ ತಮ್ಮ ಮಕ್ಕಳು ಸೇರಬೇಕೆಂಬ ಗುರಿ ಹೊಂದಿದಾಗ ಅಂತಹ ವಿದ್ಯಾರ್ಥಿ, ಪೋಷಕರ ಉದ್ದೇಶ ಈಡೇರಲು ಸುಲಭ ಸಾಧ್ಯ ಎಂದರಲ್ಲದೇ, ಪ್ರತೀ ವರ್ಷವೂ ಈ ಶಿಬಿರವನ್ನು ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಮಡಿಕೇರಿಯಲ್ಲಿ ಆಯೋಜಿಸಲಿದೆ ಎಂದು ಘೋಷಿಸಿದರು.

ಪೋಷಕರ ಪರವಾಗಿ ಹಲವು ಮಂದಿ ಮಾತನಾಡಿ, ಇಂಥ ಶಿಬಿರ ಆಯೋಜಿಸಿ ಮಕ್ಕಳಿಗೆ ಸೈನಿಕ ಶಾಲೆಯ ಸೇರ್ಪಡೆಯನ್ನು ಸುಲಭಸಾಧ್ಯವಾಗಿಸಲಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಪ್ರಾರಂಭಿಕ ವರ್ಷದಲ್ಲಿ ೧೫ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದರು.

ಸರಗೂರು ಸೈನಿಕ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ನಿವೃತ್ತ ಏರ್ ಕಮೋಡೋರ್ ಆರ್.ಎನ್ ಜಯಸಿಂಹ, ಮೈಸೂರಿನ ಸ್ಟೇಲ್ಲರೀಸ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ಕುನಾಲ್ ಕಡ್ತಾರೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಕೊಡಗು ಸಂಚಾಲಕ ಅಂಕಾಚಾರಿ ವೇದಿಕೆಯಲ್ಲಿದ್ದರು. ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ ವಂದಿಸಿದರು. ಇದೇ ಸಂದರ್ಭ ಶಿಬಿರಾರ್ಥಿಗಳಿಗೆ ಪರೀಕ್ಷಾ ತರಬೇತಿ ನೀಡಿದ ಶಿಕ್ಷಕ ವರ್ಗದವರನ್ನು ಸನ್ಮಾನಿಸಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಬಿ.ಜಿ. ಅನಂತಶಯನ, ಅಂಬೆಕಲ್ ಜೀವನ್, ಅನಿಲ್ ಹೆಚ್.ಟಿ, ಬಿ.ಕೆ. ರವೀಂದ್ರ ರೈ, ಪ್ರಮೋದ್ ಕಮಾರ್ ರೈ, ರಾಜೇಶ್ ಪಿ.ಆರ್. ಶಂಕರ್ ಪೂಜಾರಿ, ಜಂಯತ್ ಪೂಜಾರಿ, ಪಿ.ವಿ. ಅಶೋಕ್, ಶ್ರೀಹರಿರಾವ್, ಪ್ರಕಾಶ್ ಪೂವಯ್ಯ, ಗಾನಾ ಪ್ರಶಾಂತ್, ನಮಿತಾ ರೈ, ಶಫಾಲಿ ರೈ ಹಾಜರಿದ್ದರು.